ಸಾರಾಂಶ
ಹನೂರು: ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರೇಡ್ 2 ತಹಸೀಲ್ದಾರ್ ಡಾ.ಧನಂಜಯ ಹೇಳಿದರು.ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸರ್ಕಾರದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಜನರ ಬಳಿಗೆ ಅಧಿಕಾರಿಗಳು ಬಂದಿದ್ದೇವೆ. ಇಲ್ಲಿ ಜನರು ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಬಹುತೇಕ ಹಳ್ಳಿಗಳಿಂದ ಕೂಡಿರುವ ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ಜನರಿಗೆ ಬೇಕಾದ ಸೌಲಭ್ಯ ಒದಗಿಸಲು ನಾವು ನಮ್ಮ ಇಲಾಖೆಯ ಪರವಾಗಿ ಬಂದಿದ್ದೇವೆ, ಇಲ್ಲಿ ನಿಮ್ಮ ಸಮಸ್ಯೆ ದಾಖಲೆಗಳಿದ್ದರೂ ಹಣ ಬಂದಿಲ್ಲ ನಿಂತೋಗಿದೆ, ಮತ್ತೊಂದು ಕಡಿಮೆ ಹಣ ಬರುತ್ತಿದೆ ಎನ್ನುವ ಸಮಸ್ಯೆ ಗಮನಿಸಿದ್ದು, ನೈಜ ಸಮಸ್ಯೆ ಇದ್ದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ, ಜೊತೆಗೆ ಸರಿಯಾದ ದಾಖಲಾತಿ ಇದ್ದರೆ ಅಂತಹ ಅರ್ಜಿಗಳನ್ನು ಉಳಿಸಿಕೊಳ್ಳುವುದಿಲ್ಲ ತಕ್ಷಣ ಮುಂದೆ ಕಳುಹಿಸುತ್ತೇವೆ ಎಂದರು.
ಅಜ್ಜೀಪುರ ಗ್ರಾಪಂ ಅಧ್ಯಕ್ಷ ರುದ್ರನಾಯ್ಕ ಮಾತನಾಡಿ, ನಮ್ಮ ದೊಮ್ಮನ ಗದ್ದೆ ಗ್ರಾಮದಲ್ಲಿ ಸಹ ಅನೇಕರಿಗೆ ಪಿಂಚಣಿ ಸಂಬಂಧಪಟ್ಟ ಸಮಸ್ಯೆಗಳಿದ್ದು ಅದನ್ನು ತುರ್ತಾಗಿ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದರು. ಇದೇ ಸಂದರ್ಭದಲ್ಲಿ ಅಜ್ಜೀಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಶಿರಸ್ತೇದಾರ್ ನಾಗೇಂದ್ರ, ಗ್ರಾಮ ಲೆಕ್ಕಿಗ ಶೇಷಣ್ಣ, ಹಾಗೂ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು, ಭಾಗವಹಿಸಿದ್ದರು.