ಸಾರಾಂಶ
ಹಾನಗಲ್ಲ: ವೇತನ ಪರಿಷ್ಕರಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿ ಖಂಡಿಸಿ, ಪ್ರತಿಭಟಿಸಿ ತಾಲೂಕು ನಿವೃತ್ತ ನೌಕರರ ಸಂಘ ಪ್ರಧಾನಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿತು. ತಹಸೀಲ್ದಾರರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ ಸಂಘ ನಿವೃತ್ತ ನೌಕರರು, ಈ ನಿವೃತ್ತಿ ವೇತನವನ್ನೇ ಅವಲಂಬಿಸಿ ಜೀವನ ನಡಸಬೇಕಾಗಿದೆ. ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ, ನಿರಂತರ ಬೆಲೆ ಏರಿಕೆ ಒತ್ತಡಗಳು ನಿವೃತ್ತ ನೌಕರರನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಅದನ್ನು ಪರಿಗಣಿಸದೇ ಕೇಂದ್ರ ಸರ್ಕಾರ ಏಕಾಏಕಿ ನಿವೃತ್ತಿ ವೇತನ ಪರಿಷ್ಕರಣೆ ಇಲ್ಲ ಎಂದು ಹೇಳಿದೆ. ಇಂತಹ ಧೋರಣೆ ತಳೆದಿರುವುದು ಖಂಡನಾರ್ಹ. ಇದಕ್ಕೆ ಅನಿವಾರ್ಯವಾಗಿ ಬೀದಿಗಿಳಿಯುವ ಸ್ಥಿತಿ ಬರುವ ಮೊದಲು ಕೇಂದ್ರ ಸರ್ಕಾರ ಈ ವಿಚಾರವನ್ನು ಕೈಬಿಡಬೇಕು. ಅಲ್ಲದೆ ಎಂದಿನಂತೆ ಪ್ರತಿ ವೇತನ ಆಯೋಗದ ಹೊಸ ಯೋಜನೆಗಳ ಸಂದರ್ಭದಂತೆ ಈ ಬಾರಿಯ 8ನೇ ವೇತನ ಆಯೋಗ ಜಾರಿ ಮಾಡುವ ಸಂದರ್ಭದಲ್ಲಿ ಪಿಂಚಣಿ ಪಡೆಯುವ ನೌಕರರಿಗೆ ಅನ್ಯಾಯ ಮಾಡಬಾರದು. ಹಿಂದಿನ ಯೋಜನೆಗಳಂತೆ ಈ ಬಾರಿಯೂ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್. ಪಾಟೀಲ, ಸಿ. ಮಂಜುನಾಥ, ಎಸ್.ಎನ್. ತಳವಾರ, ಅಶೋಕ ದಾಸರ, ಎನ್.ಎಂ. ಪೂಜಾರ, ಲೀಲಾವತಿ ಪೂಜಾರ, ಎಚ್.ಐ. ನಾಯಕ, ನಾರಾಯಣ ಚಿಕ್ಕೊರ್ಡೆ, ಮಾಲತೇಶ ಹೆಗಡಿಕಟ್ಟಿ, ಎಸ್.ಸಿ. ಡುಮ್ಮೇರ, ಎ.ವೈ. ಅಡಿವೆಣ್ಣನವರ, ಪಾರ್ವತಿ ಹಿರೇಗೌಡರ, ಬಿ.ಎಸ್. ಕರಿಯಣ್ಣನವರ, ಮಲಕಣ್ಣನವರ, ಸಿ.ಎಫ್. ಡೊಳ್ಳಿನ, ಎಸ್.ಬಿ. ಸೀತಿಮನಿ, ಕೋಣನವರ ಈ ಸಂದರ್ಭದಲ್ಲಿದ್ದರು.