ಸಾರಾಂಶ
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನರು ತತ್ತರಿಸಿದ್ದಾರೆ. ಪ್ರಮುಖ ವೃತ್ತಗಳ ಸುತ್ತಲೂ ನಾಯಿಗಳು ಸಂಚರಿಸುತ್ತಿವೆ. ಇದರಿಂದ ಜನರು ನಿತ್ಯ ಓಡಾಡಲು ಕೂಡ ಹಿಂಜರಿಯುತ್ತಿದ್ದಾರೆ.
ಇದೇ ತಿಂಗಳಲ್ಲಿ 100ಕ್ಕೂ ಹೆಚ್ಚು ಜನರಿಗೆ ನಾಯಿ ಕಡಿತ, ಕಚ್ಚಿಸಿಕೊಂಡವರಲ್ಲಿ ವಿದ್ಯಾರ್ಥಿಗಳೇ ಅಧಿಕ
ರಾಮಮೂರ್ತಿ ನವಲಿಕನ್ನಡಪ್ರಭ ವಾರ್ತೆ ಗಂಗಾವತಿನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನರು ತತ್ತರಿಸಿದ್ದಾರೆ. ಪ್ರಮುಖ ವೃತ್ತಗಳ ಸುತ್ತಲೂ ನಾಯಿಗಳು ಸಂಚರಿಸುತ್ತಿವೆ. ಇದರಿಂದ ಜನರು ನಿತ್ಯ ಓಡಾಡಲು ಕೂಡ ಹಿಂಜರಿಯುತ್ತಿದ್ದಾರೆ.
ನಗರಸಭೆಯವರು 2023ರಲ್ಲಿ ನಗರದಲ್ಲಿ ನಾಯಿಗಳ ಸಂಖ್ಯೆ ಕುರಿತು ಸರ್ವೇ ಮಾಡಿ ಅದರಲ್ಲಿ 800ಕ್ಕೂ ಹೆಚ್ಚು ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ವ್ಯಾಕ್ಸಿನೇಷನ್ ಹಾಕಿಸಿದ್ದರು. ಇದಕ್ಕಾಗಿ ಪಂಜಾಬ್ ಮತ್ತು ಬಳ್ಳಾರಿಯ ಕೆಲವರಿಗೆ ಗುತ್ತಿಗೆ ನೀಡಿದ್ದರು. ಈಗ ಮತ್ತೆ ನಾಯಿಗಳ ಸಂಖ್ಯೆ ಅಧಿಕವಾಗಿದ್ದು, ನಿವಾಸಿಗಳು ಭಯದಲ್ಲಿ ಜೀವನ ನಡೆಸುವಂತಾಗಿದೆ.ತಿಂಗಳಲ್ಲಿ 100 ಜನರಿಗೆ ನಾಯಿ ಕಡಿತ:
ಪ್ರತಿನಿತ್ಯ 3ರಿಂದ ನಾಲ್ವರು ಬೀದಿ ನಾಯಿಗಳ ಕಡಿತದಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಜನವರಿ ಒಂದೇ ತಿಂಗಳಲ್ಲಿ (ಜ. 1ರಿಂದ 26ರವರೆಗಿನ ಅವಧಿ) 100ಕ್ಕೂ ಹೆಚ್ಚು ಜನರು ನಾಯಿಗಳ ಕಡಿತದಿಂದ ಗಾಯಗೊಂಡಿದ್ದು, ರೇಬಿಸ್( Rabies) ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗೆ ಬರುತ್ತಿರುವುದು ಸಾಮಾನ್ಯವಾಗಿದೆ.ವಿದ್ಯಾರ್ಥಿಗಳೇ ಹೆಚ್ಚು:
ನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ನಾಯಿ ಕಚ್ಚಿರುವುದು ಅಧಿಕವಾಗಿದೆ. ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಮಕ್ಕಳು ಸೇರಿದಂತೆ ಪ್ರೌಢಶಾಲೆಯ ಮಕ್ಕಳಿಗೆ ನಾಯಿ ಕಚ್ಚಿರುವ ಉದಾಹರಣೆಗಳಿವೆ. ಇದರಿಂದ ಮಕ್ಕಳನ್ನು ಹೊರಗಡೆ ಕಳಿಸಲು ಪಾಲಕರು ಹಿಂದೆ ಮುಂದೆ ನೋಡುತ್ತಿದ್ದಾರೆ.ಕಸದ ತೊಟ್ಟಿಯಲ್ಲಿ ಮುಗಿಬೀಳುವ ನಾಯಿಗಳು:
ನಗರಸಭೆಯ 35 ವಾರ್ಡುಗಳ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿ ಬೀಳುತ್ತಿದ್ದು, ಇದರಲ್ಲಿ ಮಾಂಸಾಹಾರ ಪದಾರ್ಥಗಳ ಪ್ರಮಾಣ ಹೆಚ್ಚಾಗಿದೆ. ಈ ಕಾರಣಕ್ಕೆ ನಾಯಿಗಳು ತಿನ್ನಲು ಮುಗಿಬೀಳುತ್ತವೆ. ಕಸದ ರಾಶಿಯನ್ನು ನಗರಸಭೆಯವರು ವಿಲೇವಾರಿ ಮಾಡದ ಕಾರಣ ನಾಯಿಗಳು ರಸ್ತೆ ಮಾರ್ಗ ಹೋಗುವ ಜನರಿಗೆ ತೊಂದರೆ ಕೊಡುತ್ತಿವೆ.ನಗರದ ಜ್ಯೂನಿಯರ್ ಕಾಲೇಜು ಮೈದಾನ, ವಾಲ್ಮೀಕಿ ವೃತ್ತ, ಸತ್ಯಾಂಜನೇಯ ದೇವಸ್ಥಾನದ ಮುಂಭಾಗ, ಹಿರೇಜಂತಗಲ್ ಸೇರಿದಂತೆ ವಿವಿಧ ಪ್ರದೇಶಗಳ ರಸ್ತೆ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುತ್ತದೆ.
ಮಾಂಸ ಮಾರಾಟ ಮಾಡುವ ಮಾರುಕಟ್ಟೆಯಲ್ಲಿಯೂ ಸಹ ರಸ್ತೆ ಮೇಲೆ ಪದಾರ್ಥಗಳನ್ನು ಬಿಸಾಡುತ್ತಿದ್ದರಿಂದ ನಾಯಿಗಳು ಗುಂಪು ಗುಂಪಾಗಿ ತಿನ್ನಲು ಹೋಗುತ್ತವೆ. ಇದಕ್ಕೆ ಜನರು ತಡೆದರೆ ದಾಳಿ ಮಾಡುವುದು ಖಚಿತ.ನಾಯಿಗಳ ಹಾವಳಿಯಿಂದ ಜನರು ತತ್ತರಿಸಿದ್ದು, ಇನ್ನಾದರೂ ನಗರಸಭೆಯವರು ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.