ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ರಾಜ್ಯದ ಜನರಿಗೆ ಉಚಿತವಾಗಿ ಭಯೋತ್ಪಾದಕತೆ ಸಿಗುತ್ತಿದೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳುತ್ತಿದ್ದರೂ ಸಿಎಂ, ಡಿಸಿಎಂ ಮೌನರಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಚಿಕ್ಕೋಡಿ ಜಿಲ್ಲಾಮಟ್ಟದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಸಂಸದ ಗೆದ್ದರೇ ಪಾಕಿಸ್ತಾನ ಪರ ಘೋಷಣೆ ಕೂಗಲಾಗುತ್ತಿದೆ. ಖರ್ಗೆ ಅವರೇ ನೀವು ಯಾಕೆ ಸುಮ್ಮನಿದ್ದೀರಿ? ರಾಜ್ಯದ ಜನರು ನಿಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಭಾರತ ಮಾತೆ ಕರ್ನಾಟಕದ ಜನರು ನಿಮ್ಮನ್ನು ಎಂದೂ ಕ್ಷಮಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಬ್ಲಾಸ್ಟ್‌ಗಳು ಆರಂಭವಾಗಿವೆ. ಹಿಂದೂ ಮಂದಿರಗಳ ಮೇಲೆ ಶೇ.10 ಟ್ಯಾಕ್ಸ್ ಹೇರಲಾಗಿದ್ದು, ಈ ಹಣ ತುಷ್ಟೀಕರಣದ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಎಟಿಎಂ ಸರ್ಕಾರ ಆಗಿದೆ. ರಾಜ್ಯದ ಭ್ರಷ್ಟಾಚಾರದ ಹಣ ದೆಹಲಿಯ ಜೋಳಿಗೆ ತುಂಬುತ್ತಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರದ ತುಷ್ಟೀಕರಣದ ಪರ ನಿಂತಿದೆ ಎಂದು ಆರೋಪಿಸಿದರು.ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೊಸ ಟರ್ಮಿನಲ್:
ಬಿಜೆಪಿ ವಿಚಾರಗಳಿಂದ ಎಂದೂ ದೂರವಾಗಿಲ್ಲ. ಬೇರೆ ಪಕ್ಷಗಳು ಸಮಯಕ್ಕೆ ತಕ್ಕ ಹಾಗೆ ತಮ್ಮ ವಿಚಾರಗಳಿಂದ ಬದಲಾಗಿವೆ. 370ಜೆ ಕಾಯ್ದೆ ರದ್ದು ಮಾಡಿ, ರಾಮಮಂದಿರ ನಿರ್ಮಾಣದ ಭರವಸೆಗಳನ್ನು ಈಡೇರಿಸಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಮುಂದುವರಿಸಿದ್ದೇವೆ. ಮುಸ್ಲಿಂ ಸಹೋದರಿಯರಿಗೆ ಅನ್ಯಾಯವಾಗದಂತೆ ತ್ರಿವಳಿ ತಲಾಕ್ ಜಾರಿ ಮಾಡಲಾಗಿದೆ ಎಂದರು.ವಿಕಸಿತ ಭಾರತದ ಮೂಲಕ ದೇಶದ ಜನರನ್ನು ಜೋಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಜಿ ಅವರು ಮಾಡಿದ್ದಾರೆ. ಕೇಂದ್ರದಿಂದ ಕರ್ನಾಟಕದಲ್ಲಿ 4 ಕೋಟಿ ಜನರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. 11 ಕೋಟಿ ರೈತರಿಗೆ ಪ್ರತಿ 4 ತಿಂಗಳಿಗೆ ₹2 ಸಾವಿರ ನೀಡಿ ಆತ್ಮನಿರ್ಭರ ಮಾಡಲಾಗುತ್ತಿದೆ. ಜಲಜೀವನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುತ್ತಿದೆ. ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ₹5 ಲಕ್ಷ ಕೋಟಿ ಕರ್ನಾಟಕದ ವಿಕಾಸಕ್ಕೆ ಕೇಂದ್ರದ ಮೋದಿ ಸರ್ಕಾರ ನೀಡಿದೆ. ಬರುವ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
100 ದಿನಗಳು ಗೋಲ್ಡನ್ ಡೇ:ಲೋಕಸಭೆ ಚುನಾವಣೆ ಇನ್ನೇನು ಘೋಷಣೆಯಾಗಲಿದ್ದು, ಬೂತ್ ಅಧ್ಯಕ್ಷರು ಹಾಗೂ ಬಿಎಲ್ 2 ಅವರ ಪಾತ್ರ ಬಹಳ ಪ್ರಮುಖವಾಗಿದೆ. ಬೂತ್ ಅಧ್ಯಕ್ಷರು ಪ್ರತಿ ಮತದಾರರನ್ನು ಭೇಟಿ ಆಗುವಂತೆ ಮನವಿ ಮಾಡಿ. ನಾವು ಇಷ್ಟೆಲ್ಲ ಕೆಲಸ ಮಾಡಿದ್ದು ಮೋದಿ ಅವರ ಕಾರ್ಯಗಳ ಸಂದೇಶವನ್ನು ಜನರಿಗೆ ತಲುಪಿಸಬೇಕಿದೆ. ರಾಜ್ಯ ಸರ್ಕಾರ ಜನರಿಗೆ ಯಾವ ರೀತಿ ಮೋಸ ಮಾಡುತ್ತಿದೆ ಎನ್ನುವುದನ್ನು ಜನರಿಗೆ ತಲುಪಿಸಬೇಕಿದೆ ಎಂದು ತಿಳಿಸಿದರು.
ಸಮಾವೇಶ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಿಂದ ಮಾಡಿರುವ ಕಾರ್ಯವನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ಚಿಕ್ಕೋಡಿಯಿಂದಲೇ ಬರುವ ಚುನಾವಣೆ ಕಹಳೆಯನ್ನು ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಘೋಷಿಸಿರುವುದು ಶ್ಲಾಘನೀಯ ಎಂದರು.2006 ರಿಂದ 2014ರವರೆಗೆ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಸಿತ್ತು. ಒಂದು ಕಡೆ ಮೋದಿ ಎನ್‌ಡಿಎ ಕೂಟ ಮತ್ತೊಂದೆಡೆ ಭ್ರಷ್ಟಾಚಾರದ ಇಂಡಿಯಾ ಕೂಟ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದಿಂದ ಅನ್ಯಾಯ ಆಗಿದೆ ಎಂದು ಬಿಂಬಿಸಲಾಗುತ್ತಿದೆ. 65 ಸಾವಿರ ಕೋಟಿ ಮಾತ್ರ ಯುಪಿಎ ಸರ್ಕಾರ ನೀಡಿತ್ತು. ಆದರೆ ಮೋದಿಯವರ ಆಡಳಿತ ಬಂದ ಮೇಲೆ ಸರ್ಕಾರ 2 ಲಕ್ಷ 86 ಸಾವಿರ ಕೋಟಿ ರು. ನೀಡಿದೆ. 15 ಸಾವಿರ ಕೋಟಿ ರೈಲ್ವೆ ಡಬ್ಲಿಂಗ್‌ಗಾಗಿ ನೀಡಿದೆ. ಕಿಸಾನ್ ಸಮ್ಮಾನ ಮೂಲಕ 50 ಲಕ್ಷ ರೈತರಿಗೆ ನೆರವಾಗಿದೆ. ರಾಜ್ಯ ಕಾಂಗ್ರೆಸ್ ಬಡವರ, ರೈತರ, ಮಹಿಳಾ ವಿರೋಧಿ, ದಲಿತ ವಿರೋಧಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡದೇ ದುಷ್ಟ ಕಾಂಗ್ರೆಸ್ ಸರ್ಕಾರ ಹೊಸ ದಾಖಲೆ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ನಾಚಿಕೆಗೇಡಿನ ಸಂಗತಿ:ರಾಜ್ಯದಲ್ಲಿ ಬರ ಇದ್ದರೂ, ಸಿಎಂ ಸಿದ್ದರಾಮಯ್ಯ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಅನುದಾನ ನೀಡಿಲ್ಲ. ರೈತರಿಗೆ ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡುತ್ತೇನೆ ಎಂದು ಸಿಎಂ ಹೇಳಿರುವುದು ನಾಚಿಕೆಗೇಡಿನ ಸಂಗತಿ ಹರಿಹಾಯ್ದರು.
ಪಶು ಆಸ್ಪತ್ರೆಗೆ ಹಿಂದೂಗಳು ನೀಡಿದ ಎರಡು ಎಕರೆ ಜಮೀನನ್ನು ಜಮೀರ ಅಹಮ್ಮದ್ ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡಲು ಸರ್ಕಾರ ಆದೇಶ ನೀಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ತಕ್ಕ ಉತ್ತರ ಲೋಕಸಭೆಯ ಚುನಾವಣೆಯಲ್ಲಿ ನೀಡಬೇಕಿದೆ ಎಂದು ಹೇಳಿದರು.ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ ಅಗರವಾಲ್, ಸಂಸದ ಅಣ್ಣಾಸಾಹೇಬ ಜೊಲ್ಲೆ, ಡಿ.ಎಂ.ಐಹೊಳೆ, ಮಾಜಿ ಸಂಸದ ರಮೇಶ ಕತ್ತಿ, ಶಾಸಕಿ ಶಶಿಕಲಾ ಜೊಲ್ಲೆ, ಅಮೀತ ಕೋರೆ, ಲಖನ್ ಕತ್ತಿ, ಮಹಾಂತೇಶ ಕವಟಗಿಮಠ, ರಾಜೇಶ ನೇರ್ಲಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಅಭಯ ಪಾಟೀಲ, ಮಹೇಶ ಕುಮಟಳ್ಳಿ. ವಿಭಾಗೀಯ ಪ್ರಭಾರಿ ಬಸವರಾಜ ಯಕ್ಕಂಚಿ ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ಕುಲಕರ್ಣಿ ನಿರೂಪಿಸಿದರು.
--ಕೋಟ್
ಬಿಜೆಪಿ-ಜೆಡಿಎಸ್ ಒಟ್ಟಾಗಿ ಗೆದ್ದು ಪ್ರಧಾನಿ ಅರ್ಪಣೆರಾಜ್ಯದ 28 ಕ್ಷೇತ್ರಗಳನ್ನು ಜೆಡಿಎಸ್ ಬಿಜೆಪಿ ಒಗ್ಗಟ್ಟಾಗಿ ಗೆಲ್ಲಬೇಕು ಎನ್ನುವ ಶಪಥ ಮಾಡಿದ್ದೇವೆ. ರಾಜ್ಯದ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಜೆಡಿಎಸ್ ಸೇರಿ ಗೆದ್ದು ಮೋದಿ ಅವರಿಗೆ ಅರ್ಪಣೆ ಮಾಡುತ್ತೇವೆ ಎಂದು ನಡ್ಡಾ ಅವರಿಗೆ ವಿಜಯೇಂದ್ರ ಭರವಸೆ ನೀಡಿದರು.