ಕೇಂದ್ರದ ಜನ ವಿರೋಧಿ ನೀತಿಗಳಿಂದ ಜನ ಕಂಗಾಲು: ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ

| Published : Apr 22 2024, 02:01 AM IST

ಕೇಂದ್ರದ ಜನ ವಿರೋಧಿ ನೀತಿಗಳಿಂದ ಜನ ಕಂಗಾಲು: ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಈಗಾಗಲೆ ಜನರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಕಂಗಾಲಾಗಿದ್ದಾರೆ. ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿ ಸಂವಿಧಾನದ ಮೂಲ ಆಶಯಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ (ಜನ್ನಿ) ಹೇಳಿದರು.ಹಾಸನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಗೃತಿ ಜಾಥಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹಾಸನ

ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದು, ಈಗಾಗಲೆ ಜನರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಕಂಗಾಲಾಗಿದ್ದಾರೆ. ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿ ಸಂವಿಧಾನದ ಮೂಲ ಆಶಯಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇವುಗಳ ವಿರುದ್ದ ಜನ ಜಾಗೃತರಾಗಿ ಈ ಬಾರಿ ಮತ ಚಲಾಯಿಸಬೇಕು ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ (ಜನ್ನಿ) ಹೇಳಿದರು.

ನಗರದ ಮಹಾವೀರ ವೃತ್ತದ ಬಳಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏರ್ಪಡಿಸಿದ್ದ ‘ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ’ ಸಮುದಾಯ ಕರ್ನಾಟಕದ ಜಾಥಾ ಕಾರ್ಯಕ್ರಮವನ್ನು ಹಾಸನ ನಗರದ ಮಹಾವೀರ ವೃತ್ತದಲ್ಲಿ ಉದ್ಘಾಟಿಸಿ ಮಾತನಾಡಿದರು.

‘ಸಮುದಾಯ ಕರ್ನಾಟಕ ಈ ಬಾರಿ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಪ್ರತಿರೋಧ ಕೊಡಬೇಕೆಂದು ರಾಜಪ್ಪ ದಳವಾಯಿಯವರ ‘ಜನ ಸತ್ತಿಲ್ಲ’ ಎಂಬ ಹೆಸರಿನ ಕಿರು ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತಿದ್ದೇವೆ. ಈಗಾಗಲೆ ನಾವು ಬೆಂಗಳೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಮುಗಿಸಿ ಹಾಸನಕ್ಕೆ ಬಂದಿದ್ದೇವೆ. ಜನರು ಬಹಳ ಪ್ರೀತಿಯಿಂದ ನಮ್ಮನ್ನು ಸ್ವಾಗತಿಸಿ ಪ್ರೋತ್ಸಾಹ ಕೊಡುತ್ತಿದ್ದಾರೆ. ನಾಟಕ ಇಂದಿನಿ ಭ್ರಷ್ಟ ಪರಿಸ್ಥಿತಿಗಳನ್ನು ಎತ್ತಿ ಹಿಡಿದಿದೆ. ಹೀಗೆ ಕಳೆದ ೫೦ ವರ್ಷಗಳಿಂದ ಸಮುದಾಯ ಕರ್ನಾಟಕ ಜನರ ನಡುವೆ ರೈತರು, ಕಾರ್ಮಿಕರು, ದಲಿತರು, ಶೋಷಿತರ ಪರವಾಗಿ ಕೆಲಸ ಮಾಡುತ್ತ ಬಂದಿದೆ. ಇಂದು ಈ ಸರ್ವಾಧಿಕಾರಿ ವಿರುದ್ದ ನಾಟಕ ಕಟ್ಟಿ ಜನರನ್ನು ಎಚ್ಚರಿಸಲು ಬಂದಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್ ಸಮಯದಲ್ಲಿ ಪ್ರಧಾನ ಮಂತ್ರಿ ಮತ್ತು ರಾಜ್ಯದ ೨೭ ಸಂಸದರು ಎಲ್ಲಿದ್ದರು ಎಂಬ ಪ್ರಶ್ನೆ ಮಾಡಬೇಕಿದೆ. ಸಾವಿರಾರು ಸಾವು ನೋವುಗಳಾದರೂ ಕೂಡ ಯಾವೊಬ್ಬ ಸಂಸದನೂ ಜನರ ನಡುವೆ ಇದ್ದು ಕೆಲಸ ಮಾಡಲಿಲ್ಲ. ಆದರೆ ಇಂದು ಅವರೇ ನಮ್ಮ ಮನೆಗಳ ಮುಂದೆ ಮತಕ್ಕಾಗಿ ಅಂಗಲಾಚುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದು ಕುಹಕವಾಡಿದರು.

ಚುನಾವಣೆ ಹೆಸರಿನಲ್ಲಿ ಜನರನ್ನು ರಾಜಕಾರಣಿಗಳು ಜಾತಿ, ಧರ್ಮದ ವಿಷ ಬೀಜ ಬಿತ್ತುವುದು, ಹಣ, ಹೆಂಡ ನೀಡಿ ಮತ ಖರೀದಿಸುವುದು, ಧರ್ಮ ಧರ್ಮಗಳ ನಡುವೆ ಕಂದಕಗಳನ್ನು ತಂದು ಅದನ್ನು ಮತಗಳಾಗಿ ಪರಿವರ್ತಿಸುವುದನ್ನು ನಾಟಕ ತೆರೆದಿಟ್ಟಿದೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು, ಸಾಹಿತಿ ಬಾನು ಮುಷ್ತಾಕ್, ಲೇಖಕಿ ರೂಪ ಹಾಸನ, ಕೆ.ಟಿ.ಶಿವಪ್ರಸಾದ್, ಎಚ್.ಕೆ. ಸಂದೇಶ್, ವಿಜಯ್ ಕುಮಾರ್, ರಾಜಶೇಖರ್, ನವೀನ್ ಕುಮಾರ್, ದಂಡೋರ ವಿಜಯಕುಮಾರ್, ಗೊರೂರು ರಾಜು, ಎಚ್.ಆರ್. ನವೀನ್ ಕುಮಾರ್, ಶಶಿಧರ್, ಎಸ್.ಎನ್.ಮಲ್ಲಪ್ಪ, ಎಂ.ಸಿ.ಡೋಂಗ್ರೆ, ಆರ್.ವೆಂಕಟೇಶ್, ಪುಷ್ಪ ಇದ್ದರು. ಎಂ.ಜಿ.ಪೃಥ್ವಿ ಕಾರ್ಯಕ್ರಮ ನಿರ್ವಹಿಸಿದರು.

ಹಾಸನಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏರ್ಪಡಿಸಿದ್ದ ‘ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ’ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ ಮಾತನಾಡಿದರು.