ಮುಂಡರಗಿಯಲ್ಲಿ ತುಂತುರು ಮಳೆ, ಶೀತಗಾಳಿಗೆ ಕಂಗಾಲಾದ ಜನತೆ

| Published : Aug 20 2025, 02:00 AM IST

ಸಾರಾಂಶ

ಸರಿ ಸುಮಾರು 15 ದಿನಗಳಿಂದ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಲ್ಲಿ ಕೈಗೆ ಬಂದ ಹೆಸರು ಬೆಳೆ ಬಾಯಿಗೆ ಬರದಂತಾಗಿದೆ. ಮಳೆಯ ಜತೆಗೆ ನಿರಂತರವಾಗಿ ಬೀಸುತ್ತಿರುವ ಶೀತ ಗಾಳಿಯಿಂದಾಗಿ ಜನತೆ ಕಂಗಾಲಾಗಿದ್ದಾರೆ.

ಮುಂಡರಗಿ: ಸರಿ ಸುಮಾರು 15 ದಿನಗಳಿಂದ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಲ್ಲಿ ಕೈಗೆ ಬಂದ ಹೆಸರು ಬೆಳೆ ಬಾಯಿಗೆ ಬರದಂತಾಗಿದೆ. ಮಳೆಯ ಜತೆಗೆ ನಿರಂತರವಾಗಿ ಬೀಸುತ್ತಿರುವ ಶೀತ ಗಾಳಿಯಿಂದಾಗಿ ಜನತೆ ಕಂಗಾಲಾಗಿದ್ದಾರೆ.

ಹಳ್ಳಿಗುಡಿ, ಹಳ್ಳಿಕೇರಿ, ವೆಂಕಟಾಪೂರ, ಯಕ್ಲಾಸಪುರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 8 ಸಾವಿರ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿತ್ತು. ಹೆಸರು ಬೆಳೆ ರಾಶಿ ಮಾಡುವ ಹಂತದಲ್ಲಿದ್ದಾಗಲೇ ಮತ್ತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದಾಗಿ ಹೆಸರು ಬೆಳೆ ಗಿಡದಲ್ಲಿಯೇ ಮೊಳಕೆ ಒಡೆದಿವೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇನ್ನು ಅತಿಯಾದ ಮಳೆಯಿಂದಾಗಿ ಕೆಲವೆಡೆ ಮೆಕ್ಕೆಜೋಳ ಹಾಗೂ ಹಬ್ಬುಶೇಂಗಾ ಬೆಳೆ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡು ಬರುತ್ತಿದೆ. ತೋಟಗಾರಿಕೆ ಬೆಳೆಯಾದ ಬಾಳಿ ಬೆಳೆಗೆ ಚಿಕ್ಕಿ ಬಿಳುವ ಆತಂಕದಲ್ಲಿದ್ದಾರೆ. ತಾಲೂಕಿನ ವಿವಿಧೆಡೆಗಳಲ್ಲಿ ಪಪ್ಪಾಯಿ ಫಸಲು ಬಂದಿದ್ದು, ಕಟಾವು ಮಾಡಲು ಮಳೆ ಆಸ್ಪದ ನೀಡದ ಹಿನ್ನೆಲೆಯಲ್ಲಿ ಗಿಡದಲ್ಲಿಯೇ ಕೊಳೆಯುತ್ತಿದೆ ಎನ್ನಲಾಗುತ್ತಿದೆ. ಡ್ರ್ಯಾಗನ್ ಫ್ರೂಟ್ ಬೆಳೆ ಹಾಗೂ ಗೋಡಂಬಿ, ಅಡಕೆ ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಅಧಿಕ ಮಳೆಯಿಂದ ಹಾನಿಯುಂಟಾಗುತ್ತಿದೆ ಎಂದು ಗಂಗಾಪೂರ ಗ್ರಾಮದ ರೈತ ವಿ.ಸೀತಾರಾಮರಾಜು ತಿಳಿಸಿದ್ದಾರೆ.

ಶೀತ ಗಾಳಿಯಿಂದಾಗಿ ಜನತೆ ಮನೆಬಿಟ್ಟು ಹೊರ ಬರಲು ಹಿಂದೇಟು ಹಾಕುವಂತಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ನಿತ್ಯ ಬೆಳಗ್ಗೆ ಮಳೆಯಲ್ಲಿ ನೆನೆದುಕೊಂಡು ಬರುವುದು ಕಂಡು ಬರುತ್ತಿದೆ. ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಅನೇಕರು ಶೀತ, ಕೆಮ್ಮಿನಿಂದ ಬಳಲುತ್ತಿದ್ದು, ಆಸ್ಪತ್ರೆಗಳತ್ತ ಜನತೆ ಬರುತ್ತಿದ್ದಾರೆ. ಜಿಲ್ಲಾಯಾದ್ಯಂತ ಮಂಗಳವಾರವೂ ಮಳೆ ಮುಂದುವರೆದಿದ್ದರಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿಯೂ ಸಹ ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಮಂಗಳವಾರ ಬೆಳಗ್ಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಆಗಮಿಸಿದ್ದರು. ನಂತರ ಮತ್ತೆ ತಮ್ಮ ಗ್ರಾಮಗಳತ್ತ ಮುಖ ಮಾಡಿದರು.