ಮಕ್ಕಳು ನಾಪತ್ತೆ: 2 ಶತಮಾನಗಳಿಂದ ದೀಪಾವಳಿಗೆ ಆಚರಿಸದ ಲೋಕಿಕೆರೆ ಜನ!

| Published : Oct 22 2025, 01:03 AM IST

ಮಕ್ಕಳು ನಾಪತ್ತೆ: 2 ಶತಮಾನಗಳಿಂದ ದೀಪಾವಳಿಗೆ ಆಚರಿಸದ ಲೋಕಿಕೆರೆ ಜನ!
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕವೂ ಸೇರಿದಂತೆ ಇಡೀ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಬಹುತೇಕ ಕುಟುಂಬಗಳು ತಮ್ಮ ಆರೇಳು ತಲೆಮಾರುಗಳಿಂದ ದೀಪಾವಳಿ ಹಬ್ಬವನ್ನೇ ಆಚರಿಸಿಲ್ಲ. ಬೆಳಕಿನ ಹಬ್ಬದ ಸಂಭ್ರಮವೇ ಇಲ್ಲದಂತೆ ಮನಸಿನಲ್ಲಿ ಕತ್ತಲೆ ಆವರಿಸಿದೆ!

- ಆರೇಳು ತಲೆಮಾರುಗಳ ಹಿಂದಿನ ಘಟನೆಯಿಂದ ದೀಪಾವಳಿ ಅಪಶಕುನವೆಂಬ ನಂಬಿಕೆ । ಬಹುತೇಕ ಕುಟುಂಬಗಳಲ್ಲಿ ಇಂದಿಗೂ ಸೂತಕದ ಛಾಯೆ - ಕಾಚಿಕಡ್ಡಿ, ಬ್ರಹ್ಮದಂಡಿ, ಉತ್ತರಾಣಿಕಡ್ಡಿ ತರಲು ಹೋಗಿದ್ದ ವಿವಿಧ ಜಾತಿಗಳ ಹುಡುಗರು ನಾಪತ್ತೆ । ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಯುವಕರು

- - - ನಾಗರಾಜ ಎಸ್. ಬಡದಾಳ್ ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕವೂ ಸೇರಿದಂತೆ ಇಡೀ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಬಹುತೇಕ ಕುಟುಂಬಗಳು ತಮ್ಮ ಆರೇಳು ತಲೆಮಾರುಗಳಿಂದ ದೀಪಾವಳಿ ಹಬ್ಬವನ್ನೇ ಆಚರಿಸಿಲ್ಲ. ಬೆಳಕಿನ ಹಬ್ಬದ ಸಂಭ್ರಮವೇ ಇಲ್ಲದಂತೆ ಮನಸಿನಲ್ಲಿ ಕತ್ತಲೆ ಆವರಿಸಿದೆ!

ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜ, ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮಾಜ ಹಾಗೂ ಹಿಂದುಳಿದ ವರ್ಗವಾದ ಕುರುಬ ಸಮಾಜದ ಬಹುತೇಕ ಕುಟುಂಬಗಳಿಗೆ ದೀಪಾವಳಿ ಎಂದರೆ ಸೂತಕ ಛಾಯೆ ಆವರಿಸುತ್ತದೆ. ಗ್ರಾಮದ ಶೇ.70ರಷ್ಟು ಕುಟುಂಬಗಳಲ್ಲಿ ದೀಪಾವಳಿ ದಿನಗಳಲ್ಲಿ ನೀರವ ಮೌನವು ಆವರಿಸಿರುತ್ತದೆ.

ಲೋಕಿಕೆರೆಯಲ್ಲಿ ದೀಪಾವಳಿ ಆಚರಿಸದೇ ಇರುವುದಕ್ಕೆ ಈ ಕುಟುಂಬಗಳಿಗೂ ಒಂದು ಕಹಿನೆನಪು ಇಂದಿಗೂ ಬಾಧಿಸುತ್ತಲೇ ಇದೆ. ಆ ಕೆಟ್ಟ ಘಟನೆ ಬರೋಬ್ಬರಿ 2 ಶತಮಾನಗಳ ಇತಿಹಾಸ ಹೊಂದಿದೆ. ಅಂದಿನಿಂದ ಇಂದಿಗೂ ಮಾದಿಗರು, ಕುರುಬರು, ವಾಲ್ಮೀಕಿ ನಾಯಕರು ಈ ಗ್ರಾಮದಲ್ಲಿ ದೀಪಾವಳಿ ಆಚರಿಸುವುದಿಲ್ಲ. ಕುರುಬರು ಮತ್ತು ವಾಲ್ಮೀಕಿ ನಾಯಕರಲ್ಲಿ ಕೆಲ ಬೆಡಗಿನವರು ಮಾತ್ರ ಹಬ್ಬ ಆಚರಿಸುತ್ತಾರಾದರೂ, ಬಹುತೇಕರು ದೀಪಾವಳಿ ಮಾಡುವುದಿಲ್ಲ.

2 ಶತಮಾನಗಳ ಹಿಂದೆ ಏನಾಗಿತ್ತು?:

2 ಶತಮಾನಗಳ ಹಿಂದೆ ದೀಪಾವಳಿಗೆಂದು ಲೋಕಿಕೆರೆ ಗ್ರಾಮದ ಮಾದಿಗರು, ಕುರುಬರು, ವಾಲ್ಮೀಕಿ ನಾಯಕ ಸಮುದಾಯದ ಯುವಕರು ಹಬ್ಬಕ್ಕೆ ಬೇಕಾದ ಕಾಚಿ ಕಡ್ಡಿ, ಉತ್ತರಾಣಿ ಕಡ್ಡಿ, ಬ್ರಹ್ಮದಂಡಿ ತರಲೆಂದು ಊರ ಹೊರಗಿದ್ದ ಕಾಡಿಗೆ ಹೋಗಿದ್ದರಂತೆ. ಆದರೆ, ಈ ಸಮುದಾಯಗಳ ಯುವಕರು ಮತ್ತೆ ಮನೆಗೆ ಮರಳಲೇ ಇಲ್ಲವಂತೆ. ಆಗ ಇಡೀ ಗ್ರಾಮಸ್ಥರು ಊರ ಹೊರಗಿನ ಅರಣ್ಯ, ಕೆರೆ, ಹೊಲ, ಗದ್ದೆ ಸೇರಿದಂತೆ ಸುಮಾರು ದೂರಕ್ಕೆ ಹೋಗಿ ಹುಡುಕಾಡಿದರೂ ಊರಿನ ಯುವಕರ ಸುಳಿವೇ ಸಿಗಲಿಲ್ಲವಂತೆ. ಅಂದಿನಿಂದ ಲೋಕಿಕೆರೆಯಲ್ಲಿ ಮಾದಿಗರು, ಕುರುಬರು, ವಾಲ್ಮೀಕಿ ನಾಯಕ ಸಮುದಾಯದ ಕೆಲವು ಕುಟುಂಬಗಳು ದೀಪಾವಳಿ ಆಚರಣೆ ಕೈಬಿಟ್ಟರಂತೆ. ಶತಮಾನಗಳಿಂದ ತಮ್ಮ ಕುಟುಂಬಗಳ ಪೂರ್ವಜರ ನಾಪತ್ತೆ ಘಟನೆಗೆ ಉತ್ತರ ದೊರೆಯದೇ ಇಂದಿನವರೆಗೂ ದೀಪಾವಳಿ ಆಚರಿಸದ ನಡೆಯನ್ನು ಉಗ್ರವ್ರತದಂತೆ ಮುನ್ನಡೆಸುತ್ತಿದ್ದಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.

2 ಶತಮಾನಗಳಾದರೂ ಲೋಕಿಕೆರೆ ಗ್ರಾಮದ ಬಹುತೇಕ ಕುಟುಂಬಗಳಿಗೆ ಇಂದಿಗೂ ದೀಪಾವಳಿ ಕರಾಳ ನೆನಪಾಗಿ ಕಾಡುತ್ತಿದೆ. ನಮ್ಮ ಊರಿನಲ್ಲಿ ಆರೇಳು ತಲೆಮಾರುಗಳಿಂದಲೂ ನಾವ್ಯಾರೂ ನಮ್ಮ ಮನೆಗಳಲ್ಲಿ ದೀಪಾವಳಿ ಹಬ್ಬವನ್ನೇ ಆಚರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ಆಯಾ ಸಮುದಾಯಗಳ ಮುಖಂಡರಾದ ಹಿರಿಯ ಪತ್ರಕರ್ತ ಲೋಕಿಕೆರೆ ಪುರಂದರ, ಡಿಎಸ್‌ಎಸ್‌ನ ಮಂಜುನಾಥ, ರಾಮೇಶ್ವರ, ಗ್ರಾಪಂ ಮಾಜಿ ಅಧ್ಯಕ್ಷ ತಿಪ್ಪಣ್ಣ, ಆನಂದ ಪೂಜಾರ ಇತರರು. ಲೋಕಿಕೆರೆಯಲ್ಲಿ ನಮ್ಮ ಪೂರ್ವಜರು, ಹಿರಿಯರ ಸಲಹೆಯಂತೆ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ. ಬೇರೆ ಜಾತಿಯವರು ದೀಪಾವಳಿ ಆಚರಿಸೋದು ನೋಡಿ ಖುಷಿಪಡುತ್ತೇವೆ ಎನ್ನುತ್ತಾರೆ.

ದೀಪಾವಳಿ ಹೇಳಿಕೇಳಿ ಹಿಂದೂಗಳ ದೊಡ್ಡ ಹಬ್ಬ. ಈ ದಿನದಂದು ಹಬ್ಬ ಆಚರಿಸದೇ ಇದ್ದರೂ ದೀಪಾವಳಿ ಹಬ್ಬದಂದು ಆಚರಿಸುವ ಬದಲಿಗೆ ಮಹಾಲಯ ಅಮವಾಸ್ಯೆಯಂದು ನೊಂದ ಸಮುದಾಯಗಳು, ಕುಟುಂಬಗಳು ಹಬ್ಬ ಆಚರಿಸುತ್ತಾರೆ. ಮಹಾಲಯ ಅಮವಾಸ್ಯೆ ದಿನದಂದೇ ಲೋಕಿಕೆರೆ ಗ್ರಾಮದ ಬಹುತೇಕ ಕುಟುಂಬಗಳಿಗೆ ದೀಪಾವಳಿ ಸಂಭ್ರಮದ ದಿನವಾಗಿದೆ. ಹಬ್ಬದ ನೈಜಸಂಭ್ರಮ ಮನದಲ್ಲಿ ಇಲ್ಲದಿದ್ದರೂ ಹಿರಿಯರ ಹಬ್ಬವನ್ನು ಆಚರಿಸುತ್ತಾರೆ ಅನ್ನೋದು ಅವರ ನೋವು, ಕೊರಗು, ಸಂಕಟಗಳಿಗೆ ಸಾಕ್ಷಿಯಂತಿದೆ ಎನ್ನಬಹುದು.

- - -

* (ಮುಖ್ಯಾಂಶಗಳು) - ಇಡೀ ದೇಶ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರೆ ಲೋಕಿಕೆರೆಯ ಬಹುತೇಕ ಮನೆಗಳಲ್ಲಿ ಹಬ್ಬದ ಸಂಭ್ರಮ ಇರುವುದಿಲ್ಲ. - ದೀಪಾವಳಿ ದಿನವೇ ಮಕ್ಕಳು ಕಾಣೆಯಾಗಿದ್ದು ಅಪಶಕುನ ಎಂಬ ಕಡುಬೇಸರ: ಪೂರ್ವಜರ ತೀರ್ಮಾನದಂತೆ ಹಬ್ಬಕ್ಕೆ ಗುಡ್‌ಬೈ

- ದೇಶದಲ್ಲೇ ಪಟಾಕಿ ಹಚ್ಚುವ ಸಂಭ್ರಮವಿದ್ದರೆ, ಲೋಕಿಕೆರೆಯ ಅನೇಕ ಮನೆಗಳಲ್ಲಿ ಮಾತ್ರ ಸೂತಕದ ಕತ್ತಲೆ - 2 ಶತಮಾನಗಳಿಂದಲೂ ದೀಪಾವಳಿ ಮರೆತಿರುವ ಲೋಕಿಕೆರೆ ಮಾದಿಗರು, ವಾಲ್ಮೀಕಿ ನಾಯಕರು, ಕುರುಬರು - ಮನೆ, ಮನದ ಕತ್ತಲೆ ಹೋಗಲಾಡಿಸಿ, ಬೆಳಕು ತೋರುವ ದೀಪಾವಳಿ ತಮ್ಮ ಮನೆಯ ದೀಪ ಕಸಿದಿದೆ ಎಂಬ ಕಡುಬೇಸರ

- - -

-(ಫೋಟೋ ಬರಲಿವೆ)