ಸಂಸದನಾಗಿ ಜನಸೇವೆ ಮಾಡುವೆ: ಶಾಸಕ ತುಕಾರಾಂ

| Published : Mar 25 2024, 12:45 AM IST

ಸಾರಾಂಶ

ಈ ಹಿಂದೆ ಬಸವರಾಜೇಶ್ವರಿ, ಕೆ.ಸಿ. ಕೊಂಡಯ್ಯ ಸೇರಿದಂತೆ ಕಾಂಗ್ರೆಸ್ ಸಂಸದರು ಬಳ್ಳಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಅನುದಾನ ತಂದು ಕೆಲಸ ಮಾಡಿದ್ದಾರೆ.

ಕೂಡ್ಲಿಗಿ: ಸಂಸದನಾಗಿ ಬಳ್ಳಾರಿ ಜನರ ಸೇವೆ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಬಳ್ಳಾರಿ ಲೋಕಸಭಾ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ, ಶಾಸಕ ಈ.ತುಕಾರಾಂ ಹೇಳಿದರು.

ಅವರು ಭಾನುವಾರ ಬೆಂಗಳೂರಿನಿಂದ ಸಂಡೂರಿಗೆ ಹೋಗುವಾಗ ಮಾರ್ಗ ಮಧ್ಯೆ ತಾಲೂಕಿನ ಹೊಸಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಈ ಹಿಂದೆ ಬಸವರಾಜೇಶ್ವರಿ, ಕೆ.ಸಿ. ಕೊಂಡಯ್ಯ ಸೇರಿದಂತೆ ಕಾಂಗ್ರೆಸ್ ಸಂಸದರು ಬಳ್ಳಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಅನುದಾನ ತಂದು ಕೆಲಸ ಮಾಡಿದ್ದಾರೆ. ಆದರೆ 2009ರಿಂದ ಇಲ್ಲಿಯವರೆಗೆ ಬಿಜೆಪಿಯವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಬಾರಿ ಸಿದ್ದರಾಮಯ್ಯ ನನಗೆ ಕರೆದು ನೀನೇ ಬಳ್ಳಾರಿ ಅಭ್ಯರ್ಥಿ ಆಗಬೇಕು ಅಂದಾಗ ನಾನು ಅವರ ಮಾತಿಗೆ ಒಪ್ಪಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.ಕೂಡ್ಲಿಗಿ ಕ್ಷೇತ್ರದಲ್ಲಿ ಕ್ರಿಯಾಶೀಲ ಶಾಸಕರು ಇದ್ದಾರೆ. ನಾನು ಹಾಗೂ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಉನ್ನತ ವ್ಯಾಸಂಗ ಮಾಡಿಕೊಂಡು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇವೆ. ಅವರನ್ನು ಗೆಲ್ಲಿಸಿದಂತೆ ನನಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತದಿಂದ ಗೆಲ್ಲಿಸಿ ಕಳಿಸಬೇಕು. ನಾನು ನಿಮ್ಮ ಮನೆಯ ಮಗನಂತೆ ಸರ್ವಜನಾಂಗದ ಶಾಂತಿಯ ತೋಟವಾಗಿ‌ ಕೆಲಸ ಮಾಡುತ್ತೇನೆ ಎಂದರು.ಶಾಸಕ‌ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ಸಂವಿಧಾನ ಹಾಗೂ ದೇಶಕ್ಕೆ ಅಪಾಯ ಬಂದಿದೆ. ದೇಶವನ್ನು ಉಳಿಸಲು ಈ‌ ಬಾರಿ‌ ನಾವು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ. ನಾನು ಯಾರ ಬಗ್ಗೆಯೂ ಹೆಚ್ಚು ಮಾತನಾಡುವುದಿಲ್ಲ. ಜಾತಿ ಧರ್ಮ, ಭೇದ ಮಾಡದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಾಜಿ‌ ಜಿಪಂ ಸದಸ್ಯ ಕೆ.ಎಂ. ಶಶಿಧರ್ ಸ್ವಾಮಿ, ಮಾಜಿ ಜಿಪಂ ಸದಸ್ಯ ನರಸಿಂಹಗಿರಿ ವೆಂಕಟೇಶ, ಮುಖಂಡರಾದ ನಾಗಮಣಿ ಜಿಂಕಾಲ್, ಅನ್ನಪೂರ್ಣ, ಕಾವಲಿ‌ ಶಿವಪ್ಪನಾಯಕ, ಎಚ್.ಬಿ. ಸತೀಶ್, ಎಳ್ನೀರು ಗಂಗಾಧರ, ಜಿ.ಓಬಣ್ಣ, ಬಿ.ಇ‌. ಜಗದೀಶ್, ಎಂ.ಒ. ಮಂಜುನಾಥ ಸ್ವಾಮಿ, ಹುಡೇಂ ಪಾಪನಾಯಕ, ಗಫರ್ ಸಾಹೇಬ್, ಇಜಾಜ್, ಹಿರೇಕುಂಬಳಗುಂಟೆ ಮೋನೋಜ್ ಕುಮಾರ್, ಶಫಿ, ಸಕಲಾಪುರದಹಟ್ಟಿ ಹರೀಶ್, ಹುಲಿಕೆರೆ ದುರುಗೇಶ್, ಜಲಜಾಕ್ಷಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.