ಹಂಪಿ ಗ್ರಾಪಂ ಅಧ್ಯಕ್ಷರ ಮನೆ ಮೇಲೆ ಲೋಕಾ ದಾಳಿ

| Published : Jul 24 2025, 12:53 AM IST / Updated: Jul 24 2025, 12:54 AM IST

ಹಂಪಿ ಗ್ರಾಪಂ ಅಧ್ಯಕ್ಷರ ಮನೆ ಮೇಲೆ ಲೋಕಾ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಅವರ ಕಡ್ಡಿರಾಂಪುರ ಗ್ರಾಮದ ಮನೆಯ ಮೇಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಶೋಧ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಅವರ ಕಡ್ಡಿರಾಂಪುರ ಗ್ರಾಮದ ಮನೆಯ ಮೇಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಶೋಧ ನಡೆಸಿದರು.

ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡರ ಅಳಿಯ ಬಿ.ಮಾರುತಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಯೋಜನಾ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ವರು ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ಆಸ್ತಿ, ಪಾಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿಗಳು ಕೆಲ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಜನಿ ಷಣ್ಮುಖಗೌಡ ಅವರ ಅಳಿಯ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಆಸ್ತಿಪಾಸ್ತಿ ಹಿನ್ನೆಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.ತಾಪಂ ಮಾಜಿ ಸದಸ್ಯನ ಮನೆ ಮೇಲೆ ಲೋಕಾ ದಾಳಿ, ಶೋಧ:

ಬೆಂಗಳೂರು ಬಿಬಿಎಂಪಿಯ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಹಾಯಕ ನಿರ್ದೇಶಕ ಮಾರುತಿ ಅವರ ಕಚೇರಿ ಮೇಲೆ ಲೋಕಾಯುಕ್ತರ ದಾಳಿ ಹಿನ್ನೆಲೆ ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದ ಮಾರುತಿ ಅವರ ತಂದೆ ಕೆ.ಬಸವರಾಜ್ ಅವರ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ಶೋಧ ಕೈಗೊಂಡರು.

ಬೆಳಗಿನ ಜಾವ 5 ಗಂಟೆಗೆ ಎರಡು ವಾಹನದ ಮೂಲಕ ಗ್ರಾಮದ ಕೆರೆಕೆರೆ ರಸ್ತೆಯಲ್ಲಿರುವ ವಿ.ಬಸವರಾಜ್ ಮನೆಗೆ ದಾಳಿ ನಡೆಸಿದ ಲೋಕಾಯುಕ್ತರು ಸುಮಾರು 7 ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ, ಮಾಹಿತಿ ಸಂಗ್ರಹಿಸಿದರು. ವಿ.ಬಸವರಾಜ್ ಹಾಗೂ ಅವರ ಸಂಬಂಧಿಕರ ಆಸ್ತಿಪತ್ರಗಳು ದಾಖಲೆಗಳು, ಇತರೆ ಆದಾಯ ಮೂಲ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಂಜನ್ ಕುಮಾರ್ ದಾಳಿಯ ನೇತೃತ್ವ ವಹಿಸಿದ್ದರು.ಸಚಿವ ಬೈರತಿ ಸುರೇಶ್ ಅವರ ಆಪ್ತ ಕಾರ್ಯದರ್ಶಿಯಾಗಿ ವಿ.ಬಸವರಾಜ್ ಪುತ್ರ ವಿ.ಮಾರುತಿ ಕಾರ್ಯನಿರ್ವಹಿಸುತ್ತಿದ್ದರು‌. ಇತ್ತೀಚೆಗಷ್ಟೇ ಸಚಿವ ಬೈರತಿ ಸುರೇಶ್ ಮಾರುತಿ ಅವರನ್ನು ಕೆಲಸದಿಂದ ಕೈ ಬಿಟ್ಟಿದ್ದರು. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರಿನ ಬಿಬಿಎಂಪಿಯ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಹಾಯಕ ನಿರ್ದೇಶಕ ಮಾರುತಿ ಅವರ ಕಚೇರಿ ಹಾಗೂ ಮನೆಯ ಮೇಲೆ ದಾಳಿ ನಡೆಸಿದ್ದು, ಮಾರುತಿ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.

ಅಧಿಕಾರಿಗಳು ಇದ್ದಕ್ಕಿದ್ದಂತೆ ಬೆಳಗಿನ ಜಾವ ಮನೆಗೆ ಬಂದಿದ್ದು, ನಗರ ಯೋಜನಾ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸುವ ಮಾರುತಿಗೆ ಸಂಬಂಧಿಸಿದ ದಾಖಲೆ ಕೇಳಿದರು. ಅದನ್ನು ಒದಗಿಸಿರುವೆ. ಜೊತೆಗೆ ಸೊಸೈಟಿಗೆ ಸಾಲ ಮರು ಪಾವತಿಸಲು ಮನೆಯಲ್ಲಿ ₹3 ಲಕ್ಷ ನಗದು ಇಟ್ಟುಕೊಂಡಿದ್ದೆ. ಅದು ಬಿಟ್ಟು ಬೇರೆ ಏನೂ ದೊರೆತಿಲ್ಲ ಎಂದು ದಾಳಿ ಬಳಿಕ ತಾಪಂ ಮಾಜಿ ಸದಸ್ಯ ವಿ.ಬಸವರಾಜ್ ಸುದ್ದಿಗಾರರಿಗೆ ತಿಳಿಸಿದರು.