ಸಹಕಾರಿ ರಂಗದ ತತ್ವಗಳನ್ನು ಅರ್ಥೈಸಿ ಜನರನ್ನು ಸೆಳೆಯಬೇಕು: ಡಾ. ಹೆಗ್ಗಡೆ

| Published : Jun 22 2024, 12:55 AM IST

ಸಹಕಾರಿ ರಂಗದ ತತ್ವಗಳನ್ನು ಅರ್ಥೈಸಿ ಜನರನ್ನು ಸೆಳೆಯಬೇಕು: ಡಾ. ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

1936ರಲ್ಲಿ ಆರಂಭವಾದ ಈ ಸಹಕಾರಿ ಸಂಘದಲ್ಲಿ ಪ್ರಸ್ತುತ 4560 ಸದಸ್ಯರು 50.8 ಕೋಟಿ ಪಾಲು ಭಂಡವಾಳ, 68 ಕೋಟಿ ರು. ಠೇವಣಿ ಹೊಂದಿದ್ದು, 68.23 ಕೋಟಿ ರು. ಸಾಲವನ್ನು ಸದಸ್ಯರಿಗೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಜತೆಗೆ ಸಹಕಾರಿ ತತ್ವಕ್ಕೂ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ನ್ಯೂನತೆ ಬರದಂತೆ ಜನರಿಗೆ ಜವಾಬ್ದಾರಿ ಕಲಿಸಿದರು. ಸಹಕಾರಿ ರಂಗದಲ್ಲಿ ಜನರಿಗೆ ಇನ್ನಷ್ಟು ಆಸಕ್ತಿ ಹೆಚ್ಚಿ ಅವಕಾಶಗಳು ಸಿಗುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಧರ್ಮಸ್ಥಳ ಇದರ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘದಿಂದ ಜನಸಾಮಾನ್ಯರ ವ್ಯವಹಾರಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಅವಿಭಜಿತ ದ.ಕ. ಜಿಲ್ಲೆ ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರಿ ರಂಗದಲ್ಲಿ ದೇಶವೇ ಗುರುತಿಸುವಂತಹ ಕೆಲಸ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, 24,000 ಕೋಟಿ ರು. ಸಾಲವನ್ನು ನೀಡಿದ್ದು ಸಹಕಾರಿ ಸಂಘದ ಜತೆಜತೆಗೆ ಸಾಗುತ್ತಿದೆ. ಸಹಕಾರಿ ರಂಗದ ತತ್ವಗಳನ್ನು ಜನರಿಗೆ ಅರ್ಥ ಮಾಡಿ ಅನಾಸಕ್ತರನ್ನು ಈ ರಂಗಕ್ಕೆ ಸೆಳೆಯಬೇಕು ಎಂದು ಹೇಳಿದರು.

ರೈತ ಸಭಾಭವನ ಹಾಗೂ ಊಟದ ಸಭಾಂಗಣವನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಮಾರಾಟ ಮಂಡಲ ಬೆಂಗಳೂರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿದರು. ಸಾಲಗಳನ್ನು ಮಾತ್ರ ನೀಡಲು ಸಹಕಾರಿ ಸಂಘಗಳಿರುವುದಲ್ಲ. ಇಲ್ಲಿನ ಸೇವೆ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ವಾಣಿಜ್ಯ ಬ್ಯಾಂಕುಗಳು ಸಂಕುಚಿತ ಮನೋಭಾವ ಹೊಂದಿದ್ದರೆ ಸಹಕಾರಿ ರಂಗ ಜನರ ವಿಕಸನಕ್ಕೆ ಕಾರಣವಾಗಿದೆ ಎಂದರು. ಈ ವೇಳೆ ರಾಜೇಂದ್ರ ಕುಮಾರ್‌ ಅವರು ಸಂಘದ ಈ ಕಟ್ಟಡಕ್ಕೆ ಹತ್ತು ಲಕ್ಷ ರು. ದೇಣಿಗೆಯನ್ನು ಘೋಷಿಸಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಸಹಕಾರಿ ರಂಗ ನಮ್ಮ ಹಿರಿಯರು ಹಾಕಿದ ಅಡಿಪಾಯವನ್ನು ಗಟ್ಟಿಗೊಳಿಸುತ್ತಿದೆ. ಯುವಜನತೆ ಸಹಕಾರಿ ಸಂಘಗಳತ್ತ ಒಲವು ತೋರಿಸುತ್ತಿದೆ ಎಂಬುದಕ್ಕೆ ಬೆಳ್ತಂಗಡಿ ಸಾಕ್ಷಿಯಾಗಿದ್ದು ಅನೇಕ ಯುವಕರು ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಪ್ರೀತಂ ಡಿ. ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ, ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಸಿಇಒ ಸತೀಶ್ ಹೊಳ್ಳ ಬ್ಯಾಂಕ್ ನಡೆದು ಬಂದ ದಾರಿ ಬಗ್ಗೆ ವಿವರ ನೀಡಿದರು.

ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಹಾಗೂ ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

1936ರಲ್ಲಿ ಆರಂಭವಾದ ಈ ಸಹಕಾರಿ ಸಂಘದಲ್ಲಿ ಪ್ರಸ್ತುತ 4560 ಸದಸ್ಯರು 50.8 ಕೋಟಿ ಪಾಲು ಭಂಡವಾಳ, 68 ಕೋಟಿ ರು. ಠೇವಣಿ ಹೊಂದಿದ್ದು, 68.23 ಕೋಟಿ ರು. ಸಾಲವನ್ನು ಸದಸ್ಯರಿಗೆ ನೀಡಿದೆ.

ಇದುವರೆಗೆ 16 ಅಧ್ಯಕ್ಷರು, 8 ಸಿಇಒಗಳು ಕಾರ್ಯನಿರ್ವಹಿಸಿದ್ದಾರೆ .

ಮಾಜಿ ಅಧ್ಯಕ್ಷರು ಮತ್ತು ನಿವೃತ್ತಿ ಹೊಂದಿದ ಸಿಇಒಗಳನ್ನು, ಕಟ್ಟಡದ ಎಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು.

ಮೂರು ನವೋದಯ ತಂಡಗಳ ಉದ್ಘಾಟನೆ, 5 ಅತ್ಯುತ್ತಮ ತಂಡಗಳಿಗೆ ಪುರಸ್ಕಾರ ನೀಡಲಾಯಿತು.