ಸಾರಾಂಶ
ಅಸ್ಸಾಂ ರಾಜ್ಯದ ಬುಡಕಟ್ಟು ಜನರ ಸಂಸ್ಕೃತಿ ಹಬ್ಬ (ಕರ್ಮ ಪೂಜಾ ಫೆಸ್ಟಿವಲ್) ಆಚರಣೆಗೆ ಮಿತಿ ಮೀರಿದ ಸಂಖ್ಯೆಯಲ್ಲಿ ಜನ ಸಮಾವೇಶಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಚರಣೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಪರಿಣಾಮ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಸ್ಸಾಂ ರಾಜ್ಯದ ಬುಡಕಟ್ಟು ಜನರ ಸಂಸ್ಕೃತಿ ಹಬ್ಬ (ಕರ್ಮ ಪೂಜಾ ಫೆಸ್ಟಿವಲ್) ಆಚರಣೆಗೆ ಮಿತಿ ಮೀರಿದ ಸಂಖ್ಯೆಯಲ್ಲಿ ಜನ ಸಮಾವೇಶಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಚರಣೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ ಪರಿಣಾಮ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.ಭಾನುವಾರ ಸರ್ಜಾಪುರ ರಸ್ತೆಯ ಕಾಲೇಜು ಮೈದಾನದಲ್ಲಿ ಆಯೋಜಕರು ಸರಿಯಾದ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಠಾಣೆ ಪೊಲೀಸರು ಕಾರ್ಯಕ್ರಮದ ಆಚರಣೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿ, ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಸಂಬಂಧ ಫೆಸ್ಟಿವಲ್ ಕಮಿಟಿ ಮುಖ್ಯಸ್ಥರು, ಆಯೋಜಕರು ಸೇರಿದಂತೆ ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕರ್ಮ ಪೂಜಾ ಉತ್ಸವ ಆಚರಣೆಗೆ ಸುಮಾರು 500 ಜನರು ಸೇರುವುದಾಗಿ ಮಾಹಿತಿ ನೀಡಿ ಆಯೋಜಕರು ಪೊಲೀಸರ ಅನುಮತಿ ಪಡೆದಿದ್ದರು. ಆದರೆ, 2-3 ಸಾವಿರ ಜನರು ಭಾಗವಹಿಸಿದ್ದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗುವುದನ್ನು ಮನಗಂಡ ಪೊಲೀಸರು, ಕಾರ್ಯಕ್ರಮ ನಿಲ್ಲಿಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ. ಕಾರ್ಯಕ್ರಮ ಆಚರಣೆಗೆ ನೀಡಿದ್ದ ಅನುಮತಿ ರದ್ದುಗೊಳಿಸಿದ್ದಾರೆ.ಆಯೋಜಕರು ಸರಿಯಾದ ವ್ಯವಸ್ಥೆ ಕಲ್ಪಿಸದ ಪರಿಣಾಮ ಕಾರ್ಯಕ್ರಮಕ್ಕೆ ಬಂದಿದ್ದವರು ನಿರಾಶರಾಗಿ ಕಾರ್ಯಕ್ರಮದ ಸ್ಥಳ ತೊರೆಯಲು ನಿರಾಕರಿಸಿದ್ದಾರೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಹಾಗೂ ಸಂಚಾರ ಪೊಲೀಸರ ಸಹಾಯ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.