ಧ್ರುವ ಮತ್ತು ನನ್ನನ್ನು ಜನರು ಲವಕುಶ ಅಂತಿದ್ರು: ಬಾಲರಾಜು

| Published : Mar 20 2024, 01:20 AM IST

ಧ್ರುವ ಮತ್ತು ನನ್ನನ್ನು ಜನರು ಲವಕುಶ ಅಂತಿದ್ರು: ಬಾಲರಾಜು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೆಗ್ಗವಾಡಿಯಲ್ಲಿರುವ ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ ಅವರ ಸಮಾಧಿಗೆ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮಂಗಳವಾರ ತಮ್ಮ ಬೆಂಬಲಿಗ ರೊಂದಿಗೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು. ಅತ್ಮೀಯ ಗೆಳೆಯನನ್ನು ನೆನದು ಭಾವುಕರಾಗಿ ಸಮಾಧಿ ಬಳಿ ಕಣ್ಣೀರಿಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯಲ್ಲಿರುವ ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ ಅವರ ಸಮಾಧಿಗೆ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮಂಗಳವಾರ ತಮ್ಮ ಬೆಂಬಲಿಗ ರೊಂದಿಗೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು. ಅತ್ಮೀಯ ಗೆಳೆಯನನ್ನು ನೆನದು ಭಾವುಕರಾಗಿ ಸಮಾಧಿ ಬಳಿ ಕಣ್ಣೀರಿಟ್ಟರು.

ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಕ್ಷೇತ್ರ ಪ್ರವಾಸದಲ್ಲಿರುವ ಎಸ್. ಬಾಲರಾಜು, ಬೆಳಗ್ಗೆ ಮೈಸೂರಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶಿವರಾತ್ರಿದೇಶಿಕೇಂದ್ರಸ್ವಾಮಿಗಳ ಆಶೀರ್ವಾದ ಪಡೆದು. ಅಲ್ಲಿಂದ ನೇರವಾಗಿ ಹೆಗ್ಗವಾಡಿಯಲ್ಲಿರುವ ಗೆಳೆಯ ಹಾಗೂ ಮಾಜಿ. ಸಂಸದ ದಿ. ಆರ್. ಧ್ರುವನಾರಾಯಣ ಅವರ ಸಮಾಧಿಗೆ ತೆರಳಿ ಮಾಲಾರ್ಪಣೆ ಮಾಡಿದರು. ಕೆಲಹೊತ್ತು ಸಮಾಧಿಯ ಬಳಿಯೇ ಕುಳಿತು ಗೆಳೆಯನ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ ಬಾವುಕರಾಗಿ ಸಮಾಧಿಯನ್ನು ಪ್ರದಕ್ಷಿಣೆ ಹಾಕಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ಧ್ರುವನಾರಾಯಣ ಅವರ ಸ್ನೇಹ 30 ವರ್ಷಗಳ ಹಳೆಯದು. ನನ್ನ ಎಲ್ಲ ಯಶಸ್ಸು ಮತ್ತು ಸಂಕಷ್ಟದ ಸಂದರ್ಭದಲ್ಲಿಯು ಧ್ರುವನಾರಾಯಣ ಭಾಗಿಯಾಗಿದ್ದರು. ನಾನು ಮತ್ತು ಧ್ರುವನಾರಾಯಣ ಇಬ್ಬರು ಸಹ ರಾಜಶೇಖರಮೂರ್ತಿ ಅವರ ಅಪ್ಪಟ ಶಿಷ್ಯರು, ನಮ್ಮಿಬ್ಬರನ್ನು ಸಹ ರಾಜಶೇಖರಮೂರ್ತಿಗಳು ಶಾಸಕರನ್ನಾಗಿ ಮಾಡಬೇಕು. ನಮ್ಮಿಬ್ಬರನ್ನು ಲವ-ಕುಶ ಹಾಗೂ ರಾಮ ಲಕ್ಷ್ಮಣ ಎಂದು ಕರೆಯುತ್ತಿದ್ದರು. ಅವರ ಒಡನಾಡದಲ್ಲಿದ್ದ ನಾವು ಪರಿಪಕ್ವ ರಾಜಕಾರಣಿಗಳಾಗಳು ಸಾಧ್ಯವಾಯಿತು ಎಂದರು.

ಅದೃಷ್ಟ ಧ್ರುವನಾರಾಯಣ್ ಅವರ ಕೈ ಹಿಡಿಯಿತು. 2 ಬಾರಿ ಶಾಸಕರಾಗಿ, ಸಂಸದರಾಗಿ ಉನ್ನತ ಹುದ್ದೆಗಳನ್ನು ಆಲಂಕರಿಸಿದರು. ಇದರಲ್ಲಿ ಅವರ ಪರಿಶ್ರಮ ಮತ್ತು ಸಂಘಟನೆಯ ಚತುರತೆ ಇತ್ತು. ಕುಟುಂಬಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಹೀಗಾಗಿ ಅವರಿಗೆ ಈ ಬಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಯಾಗುವ ಯೋಗ ಇತ್ತು. ಅದರೆ, ವಿಧಿಯಾಟವೇ ಬೇರೆ ಆಯಿತು ಎಂದು ಬಾಲರಾಜು ಭಾವುಕರಾದರು.

ನಾನು ಪಕ್ಷಾಂತರಿ ಅಲ್ಲ:

ರಾಜಕೀಯ ಗುರು ಎಂ. ರಾಜಶೇಖರಮೂರ್ತಿ ಅವರನ್ನು ಹಿಂಬಾಲಿಸಿದೆ. ಅವರು ಕಾಲವಾದ ನಂತರ ಆರ್. ಧ್ರುವನಾರಾಯಣ ಅವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಸಂಘಟನೆಯ ಜವಾಬ್ದಾರಿಯನ್ನು ನೀಡಿ, ತಮ್ಮೊಂದಿಗೆ ಸೇರಿಸಿಕೊಂಡಿದ್ದರು. ನನ್ನ ತಾಯಿ ಧ್ರುವನಾರಾಯಣ ಅವರನ್ನು ಸಹ ಮತ್ತೊಬ್ಬ ಮಗನಂತೆ ಬಹಳ ಪ್ರೀತಿಯಿಂದ ನೋಡುತ್ತಿದ್ದರು. ಅವರು ತೀವ್ರ ಅನಾರೋಗ್ಯದಿಂದ ಅಸ್ಪತ್ರೆ ಸೇರಿದಾಗ ಧ್ರುವನಾರಾಯಣ ಅವರು ನೋಡಲು ಬಂದಿದ್ದರು. ಆ ಸಂದರ್ಭದಲ್ಲಿ ನನ್ನ ತಾಯಿ ಧ್ರುವನಾರಾಯಣ ಅವರ ಕೈ ಹಿಡಿದು ನನ್ನ ಮಗನ ಕೈ ಬಿಡಬೇಡ. ನಿನ್ನಿಂದ ಮಾತ್ರ ಬಾಲು ಶಾಸಕನಾಗಲು ಸಾಧ್ಯ. ಆತನಿಗೆ ನೀನೆ ದಾರಿ ತೋರಿಸು ಎಂದಿದ್ದರು. ಇಷ್ಟೆಲ್ಲರ ಮಧ್ಯೆ ಪ್ರೀತಿಯ ಗೆಳೆಯ ಧ್ರುವನಾರಾಯಣ ನಮ್ಮನ್ನು ಆಗಲಿದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಅಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ ಎಂದರು.

ಈ ವೇಳೆ ಮುಖಂಡ ಡಾ. ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್, ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್, ತಾಪಂ ಮಾಜಿ ಸದಸ್ಯ ರಾಮು, ಮುಖಂಡರಾದ ಹೊಂಗನೂರು ಮಹದೇವಸ್ವಾಮಿ, ಮದ್ದೂರು ಕುಮಾರ್ ಹಾಜರಿದ್ದರು.