ಕುಕನೂರು: ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಬುಧವಾರ ಹೋಳಿ ಹಬ್ಬದ ಪ್ರಯುಕ್ತ ಜನರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂತಸ ಪಟ್ಟರು.
ರಾತ್ರಿ ವೇಳೆ ಸಂಗ್ರಹಿಸಿದ್ದ ಕಟ್ಟಿಗೆ,ಕುಳ್ಳನ್ನು ಕಾಮಣ್ಣನೆಂದು ಪೂಜಿಸಿ ಸುಟ್ಟರು.ಬೆಳಗ್ಗೆ ಅದೇ ಬೆಂಕಿಯ ತುಂಡನ್ನು ಮನೆಗೆ ತಂದು ಮನೆ ಮುಂದೆ ಹುಳಿ ಕಡಲೆ ಸುಟ್ಟು ತಿಂದರು. ನಂತರ ಬಣ್ಣದಾಟದಲ್ಲಿ ಜನತೆ ಮಿಂದೆದ್ದರು.ಓಕುಳಿ ಬಂಡಿ:ಪಟ್ಟಣದ ಕೋಳಿಪೇಟೆಯ ಜನತೆ ಎತ್ತಿನ ಓಕುಳಿ ಬಂಡಿ ನಿರ್ಮಿಸಿದ್ದರು.ಎತ್ತಿನ ಬಂಡಿಯಲ್ಲಿ ಬಣ್ಣ ತುಂಬಿದ ಬ್ಯಾರಲ್ ಇರಿಸಿದ್ದರು. ದಾರಿಯೂದ್ದಕ್ಕೂ ಬಣ್ಣ ಎರಚುತ್ತಾ ತೆರಳಿದರು. ಈ ಬಂಡಿಯ ಮುಂದೆ ಅಲಂಕರಿಸಿದ್ದ ಎತ್ತಿನ ಬಂಡಿ ಹಾಗೂ ಜೋಡೆತ್ತು,ಎರಡು ಕರುಗಳ ಮೆರವಣಿಗೆ ವಾದ್ಯ ಮೇಳದೊಂದಿಗೆ ಜರುಗಿತು. ಯುವಕ ವೃಂದ ಸಹ ಬಣ್ಣದಾಟದಲ್ಲಿ ಕೇಕೆ ಹಾಕುತ್ತಾ ಹೆಜ್ಜೆ ಹಾಕಿ ಸಂತಸಪಟ್ಟರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಈ ಓಕುಳಿ ಬಂಡಿ ಚಲಿಸಿತು.ದಾರಿಯುದ್ದಕ್ಕೂ ಬಂಡಿಯ ಬ್ಯಾರಲಿನಲ್ಲಿದ್ದ ಬಣ್ಣ ಎರಚುತ್ತಾ ಸಾಗಿದರು.
ಸಂಭ್ರಮ ಇಮ್ಮಡಿ:ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನರು ಪರಸ್ಪರ ಬಣ್ಣ ಹಚ್ಚುತ್ತಾ ಸಂಭ್ರಮಿಸಿದರು.ಯುವಕರು, ಮಹಿಳೆಯರು, ಮಕ್ಕಳು ಸಂಭ್ರಮದಲ್ಲಿ ಭಾಗಿಯಾದರು. ಸ್ನೇಹತರ ಒಡಗೂಡಿ ಬಣ್ಣ ಹಚ್ಚುತ್ತಾ ಪರಸ್ಪರ ವಿನಿಮಯ ಮಾಡಿಕೊಂಡಿದ್ದ ಹೋಳಿ ಸಂಭ್ರಮ ಇಮ್ಮಡಿಗೊಳಿಸಿತ್ತು.