ನಾಗರಾಜ ಮಾರೇರಹುಬ್ಬಳ್ಳಿ:

ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಮುಂದಾಗುತ್ತಿದ್ದಂತೆ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಬಾಡಿಗೆದಾರರು ಸರ್ಕಾರ ಕೇಳಿದ ಯಾವ ದಾಖಲೆ ನಾವು ಸಲ್ಲಿಸಬೇಕು ಎಂಬ ಯೋಚನೆಯಲ್ಲೂ ಇದ್ದಾರೆ. ಜತೆಗೆ ಬಾಡಿಗೆ ಕರಾರು ಪತ್ರ ಮಾಡಿಸಿಕೊಳ್ಳಲು ಬಾಂಡ್‌ ಖರೀದಿಗೆ ಸಹಕಾರಿ ಸಂಘಗಳಿಗೆ ಎಡತಾಕುತ್ತಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 2023ರಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿತ್ತು. ಅದರಲ್ಲಿ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಪ್ರೀ ವಿದ್ಯುತ್ ಘೋಷಿಸಲಾಗಿತ್ತು. ಅದರಲ್ಲಿ ಮೊದಲಿದ್ದ ಮೀಟರ್‌ಗೆ 200 ಯೂನಿಟ್, ಹೊಸ ಮೀಟರ್‌ಗೆ 58 ಯೂನಿಟ್ ನಿಗದಿಪಡಿಸಿ ಸರ್ಕಾರವೇ ವಿದ್ಯುತ್ ಬಿಲ್ ಪಾವತಿಸುತ್ತಿತ್ತು. ಆದರೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳು ಅನ್ಯ ರಾಜ್ಯದ ಜನರ ಪಾಲಾಗುತ್ತಿರುವುದು ಗಮನಕ್ಕೆ ಬಂತು. ರಾಜ್ಯದ ಮತದಾರರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ.

ಗೊಂದಲ ಏಕೆ?

ಗೃಹಜ್ಯೋತಿ ಪರಿಷ್ಕರಣೆ ವೇಳೆ ಹೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಆಧಾರ್ ಕಾರ್ಡ್‌, ವೋಟರ್‌ ಐಟಿ, ಪಾನ್‌ ಕಾರ್ಡ್‌, ಬಾಡಿಗೆ ಕರಾರು ಪತ್ರ ಹಾಗೂ ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ ಮಾತ್ರ) ನೀಡಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.. ಆದರೆ, ಗೃಹಜ್ಯೋತಿ ನೋಂದಣಿ ವೇಳೆ ಕೇವಲ ಆಧಾರ್‌ ಕಾರ್ಡ್‌ ನೀಡಿದ್ದೇವೆ. ಆ ದಾಖಲೆಯಲ್ಲಿರುವ ವಿಳಾಸ ಬೇರೆ ಊರಿನದ್ದು ಇದೆ. ನಾವು ಬಾಡಿಗೆ ಮನೆಯಲ್ಲಿ ಇದ್ದ ವಿಳಾಸವೇ ಬೇಕು ಎಂದರೆ ಇಲ್ಲ. ನಮ್ಮ ಬಾಡಿಗೆ ಕರಾರು ಪತ್ರವಿದ್ದೂ ಅದು ನೀಡಿದರೆ ಸಾಲುವುದಿಲ್ಲವೇ. ಅನ್ವಯಿಸಿದರೇ ಮಾತ್ರವೆಂದರೆ ಏನು ಎಂಬ ಪ್ರಶ್ನೆ ಸಾರ್ವಜನಿಕರದ್ದು.


ಬಾಡಿಗೆ ಕರಾರು ಪತ್ರವೇ ಇಲ್ಲ:

ಬಹುತೇಕ ಬಾಡಿಗೆದಾರರು ಬಾಡಿಗೆ ಕರಾರು ಪತ್ರವನ್ನೇ ಮಾಡಿಕೊಂಡಿಲ್ಲ. ಹಲವು ವರ್ಷಗಳಿಂದ ಒಂದೇ ಮನೆಯಲ್ಲಿ ಇರುವುದರಿಂದ ಮೊದಲಿಗೆ ಕರಾರು ಪತ್ರ ಮಾಡಿಕೊಂಡವರು ತದನಂತರ ಮಾಡಿಸಿಕೊಂಡಿಲ್ಲ. ಇದೀಗ ಗೃಹಜ್ಯೋತಿ ಪರಿಷ್ಕರಣೆಗೆ ಬೇಕು ಎನ್ನುತ್ತಿದ್ದಂತೆ ಬಾಡಿಗೆಗೆದಾರರು ಕರಾರು ಪತ್ರ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. 2500 ಸಿಬ್ಬಂದಿಯಿಂದ ಮನೆ-ಮನೆ ಭೇಟಿ

ಹೆಸ್ಕಾಂ ವ್ಯಾಪ್ತಿಗೆ ಒಳಪಡುವ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಒಟ್ಟು 2500ಕ್ಕೂ ಹೆಚ್ಚು ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಇವರಿಗೆ ತರಬೇತಿ ನೀಡಿದ್ದು ಎರಡು ತಿಂಗಳ ವರೆಗೆ ಪರಿಷ್ಕರಣೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಕಳೆದ‌ ಮೂರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಯಾವುದೇ ಬಾಡಿಗೆ ಕರಾರು ಪತ್ರ ಇಲ್ಲದೆ ಇದ್ದೇವೆ. 2023ರಲ್ಲಿ ಗೃಹಜ್ಯೋತಿ ಫಲಾನುಭವಿ ಆಗಲು ಆಧಾರ ನಂಬರ್ ಹಾಕಿದ್ದು ಅದು ನಮ್ಮೂರಿನ ವಿಳಾಸ ಹೊಂದಿತ್ತು. ಇದೀಗ ಸರ್ಕಾರ ನಿಗದಿಪಡಿಸಿದ ದಾಖಲೆ ಯಾವ ವಿಳಾಸದ್ದು ಇರಬೇಕು ಎನ್ನುವುದನ್ನು ಖಚಿತಪಡಿಸಿಲ್ಲ. ಇದರಿಂದ ಗೊಂದಲ ಮೂಡಿದೆ.

ಗುರು ಕೆ. ಹೆಸ್ಕಾಂ ಗ್ರಾಹಕ

ಗೃಹಜ್ಯೋತಿ ಪರಿಷ್ಕರಣೆಗೆ ಸರ್ಕಾರ ಮುಂದಾಗುತ್ತಿದ್ದಂತೆ ಬಾಡಿಗೆ ಕರಾರು ಪತ್ರ ಮಾಡಿಕೊಳ್ಳಲು ಬಾಂಡ್ ಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಡೆದುಕೊಳ್ಳಲು ಬರುತ್ತಿದ್ದಾರೆ. ಬುಧವಾರ 100ಕ್ಕೂ ಹೆಚ್ಚು ಜನರಿಗೆ ಬಾಂಡ್ ನೀಡಲಾಗಿದೆ.

ಸತೀಶ ಜಿ.ಎಂ. ಸಹಕಾರಿ ಸಂಘದ ಸಿಬ್ಬಂದಿ