ಜನರಿಗೆ ತೊಂದರೆ ಆಗುವ ಕಾನೂನು ಬೇಡ

| Published : Jan 07 2024, 01:30 AM IST

ಸಾರಾಂಶ

ಕೇಂದ್ರ ಸರ್ಕಾರರದ ಹಿಟ್ ಆಂಡ್ ರನ್ ಕಾಯ್ದೆ ವಿರೋಧ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ, ಯಾವುದೇ ಕಾನೂನು ಜಾರಿ ಮಾಡುವ ಮೊದಲು ಸಾರ್ವಜನಿಕರಿಗೆ ಅದರಿಂದಾಗುವ ತೊಂದರೆಗಳ ಬಗ್ಗೆ ವಿಚಾರಣೆ ಮಾಡಿ ಕಾಯ್ದೆ ರೂಪಿಸಬೇಕು. ದುಡಿದು ತಿನ್ನುವ ಜನರಿಗೆ ತೊಂದರೆ ಆಗುವಂತಹ ಕಾಯ್ದೆಗಳನ್ನು ಜಾರಿಗೆ ತರಬಾರದು ಎಂದು ಕೆ.ಪಿ.ಸಿ.ಸಿ ಕಿಸಾನ್‌ ಘಟಕದ ಕಾಂಗ್ರೆಸ್‌ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ ಹೇಳಿದರು.

ಸ್ಥಳೀಯ ಕೆ.ಇ.ಬಿ ಗಣೇಶ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಆಟೋ ಚಾಲಕರು, ಕ್ಯಾಬ್, ಟ್ರಕ್, ಟ್ರ್ಯಾಕ್ಟರ್‌, ಟಾಟಾ ಎಎಸ್ ಸೇರಿದಂತೆ ಇನ್ನೂ ಹಲವಾರು ವಾಹನ ಚಾಲಕರು ಶನಿವಾರ ಕೇಂದ್ರ ಸರ್ಕಾರರದ ಹಿಟ್ ಆಂಡ್ ರನ್ ಕಾಯ್ದೆ ವಿರೋಧಿಸಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರರ ಹಿಟ್ ಆಂಡ್ ರನ್ ಕಾಯ್ದೆ ಮಾಡಿ ಲಾರಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರು. ದಂಡ ವಿಧಿಸುವ ಕಾನೂನನ್ನು ಕೂಡಲೇ ಕೈ ಬಿಡಬೇಕು. ಇದರಿಂದ ಬಡ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೇ ಈಗಾಗಲೇ ದೆಹಲಿ ಹಾಗೂ ಇನ್ನಿತರ ಕಡೆಗಳಲ್ಲಿ ನಿಮ್ಮಂತ ವಾಹನ ಚಾಲಕರು ಈ ಕಾಯ್ದೆ ವಿರುದ್ಧ ಹೋರಾಟ ಮಾಡಿ ಪ್ರತಿಭಟಿಸಿದ್ದಾರೆ. ಅದರ ಪರಿಣಾಮದಿಂದ ಸಾರ್ವಜನಿಕರಿಗೆ ದಿನಸಿ, ಹಾಲು, ಪೆಂಟ್ರೋಲ್, ಡೀಸೆಲ್‌ ತರಕಾರಿ ಹೀಗೆ ಇನ್ನೂ ಹತ್ತು ಹಲವಾರು ವಸ್ತುಗಳ ಸಿಗದೇ ಜನರು ಪರಿತಪಿಸುವಂತಾಗಿದೆ. ಪರಿಸ್ಥಿತಿ ಹದಗೆಟ್ಟು ಹೋಗಿದ್ದನ್ನು ಗಮನಿಸಿದ ಕೇಂದ್ರ ಸರ್ಕಾರರ ಈ ಕಾಯ್ದೆಯನ್ನು ಇನ್ನೂ ನಾವು ಜಾರಿ ಮಾಡಿಲ್ಲ. ಹಾಗೆ ಒಂದು ವೇಳೆ ಈ ಕಾಯ್ದೆ ಜಾರಿ ಮಾಡುವುದಾದರೆ ಕೇಂದ್ರ ಸರ್ಕಾರರ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಅಖಿಲ ಭಾರತ ಮೋಟಾರು ಕಾಂಗ್ರೆಸ್‌ ಕಮಿಟಿ ಸದಸ್ಯರನ್ನು ಕರೆಸಿ ಸೂಕ್ತ ಸಲಹ ಸೂಚನೆ ಪಡೆದು ಇದರ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಲಾಗುವುದು. ಅಲ್ಲಿಯ ವರೆಗೆ ಎಲ್ಲ ವಾಹನ ಚಾಲಕರು ತಮ್ಮ ತಮ್ಮ ಪ್ರತಿಭಟನೆಗಳನ್ನು ಕೈಬಿಡಬೇಕು ಎಂದು ಅವರೇ ತಿಳಿಸಿದ್ದಾರೆ. ಕಾರಣ ನೀವು ಈಗ ಈ ವಿಷಯನ್ನು ಇಲ್ಲಿಗೆ ಬಿಟ್ಟು ಯಾವುದೇ ರೀತಿ ಪ್ರತಿಭಟನೆಗಳನ್ನು ಮಾಡದೇ ಶಾಂತ ರೀತಿಯಿಂದ ನಿಮ್ಮ ನಿಮ್ಮ ಕೆಲಸಗಳಲ್ಲಿ ಮುಂದಾಗಿ, ಅದು ಬಂದಾಗ ಮತ್ತೆ ವಿಚಾರಣೆ ಮಾಡೋಣ ಎಂದರು.

ನಂತರ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ, ವಾಹನ ಚಾಲಕರು ಇಂತಹ ತೊಂದರೆಗಳು ಬಂದಾಗ ಮಾತ್ರ ಎಲ್ಲರೂ ಸೇರಿಕೊಳ್ಳುವ ಮನೋಭಾವ ತೆಗೆದುಹಾಕಿ ನೀವು ಕೂಡಾ ಒಂದು ಸಂಘಟನೆ ಮಾಡಿ ಎಲ್ಲ ವಾಹನ ಚಾಲಕರನ್ನು ಅದರಲ್ಲಿ ಸೇರಿಸಿಕೊಳ್ಳಿ. ಎಲ್ಲರೂ ಒಂದಾಗಿದ್ದಾಗ ಮಾತ್ರ ಇಂಥ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯ. ಅಲ್ಲದೇ ನಿಮ್ಮ ವಿರುದ್ದವಾಗಿ ಎಂತಹ ಸಂದರ್ಭಗಳೇ ಬಂದರೂ ಎಲ್ಲರೂ ಹೋರಾಟಕ್ಕೆ ಸಿದ್ಧರಾಗಬೇಕು. ಅಂದಾಗ ಮಾತ್ರ ನಿಮ್ಮ ಬೇಡಿಕೆಗಳು ಈಡೇರಲು ಸಾಧ್ಯ. ಒಟ್ಟಿನಲ್ಲಿ ಸಂಘಟನೆಯಿಂದ ಮಾತ್ರ ನಿಮಗೆ ಗೆಲುವು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಮುಖಂಡ ನಬಿ ಯಕ್ಷಂಬಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಸಿಂಗಾಡಿ, ನಜೀರ ಝಾರೆ, ಹನಮಂತ ನಾವಿ, ಫಾರೂಖ ಸುತಾರ, ರಾಜು ಚೌವ್ಹಾನ, ಸಯ್ಯದ ಮೋಪಗಾರ, ಇಸ್ಮಾಯಿಲ್ ಪೆಂಡಾರಿ, ಅಜು ಮಕಾಂದಾರ, ಸೈಯದ ಬರಗಿ, ಮಲ್ಲು ಕಂಪು, ಯುವರಾಜ ನಂದೇಶ್ವರ, ಅಸ್ಕರ ಪಾಂಡು, ಸದ್ದಾಂ ಪೆಂಡಾರಿ, ಪಾರೂಪ ಮಕಾನದಾರ, ಮಹಾದೇವ ಉತ್ನಾಳ, ಪ್ರದೀಪ, ಶಂಕರ ಚಂಡೋಲ, ರಾಘು ಅನೇಪ್ಪಗೋಳ, ಕರೆಪ್ಪ ಬಂಡಿ, ಸತೀಶ ಹ್ಯಾಗಾಡಿ, ರಿಯಾಜ ನದಾಫ, ಚಂದ್ರಶೇಖರ ಹಿರೇಮಠ, ಜುಬೇರ ಮಕಾನದಾರ, ಅಶ್ರಫ ಯಾದವಾಡ, ಮೇಹಬೂಬ ಬೆಳಗಲಿ, ಶಿರಾಜ ಮಾಲದಾರ, ಸೋಮು ತಳವಾರ ವಿಶಾಲ ತೇಲಿ, ಸೇರಿದಂತೆ ಹಲವರು ಇದ್ದರು.

--

ಕೋಟ್‌

ಈಗ ನಮ್ಮ ನಾಯಕರು ಹೇಳಿದಂತೆ ಎಲ್ಲರೂ ಪ್ರತಿಭಟನೆ ಮಾಡುವ ಕಾರ್ಯ ಕೈಬಿಡಬೇಕು. ಶಾಂತ ರೀತಿಯಿಂದ ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಿ. ಕೆಟ್ಟ ಸಂದರ್ಭ ಬಂದರೆ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಹೋರಾಟ ಮಾಡಲು ನಾವೇಂದಿಗೂ ಸಿದ್ದ.

-ನಬಿ ಯಕ್ಷಂಬಿ, ಮುಖಂಡ.