ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80ಕ್ಕೂ ಅಧಿಕ ಪ್ರಮಾಣದಲ್ಲಿ ಸಿಜೇರಿಯನ್ ಹೆರಿಗೆ ಮಾಡಲಾಗುತ್ತಿದ್ದು, ಅಧಿಕ ಪ್ರಮಾಣದಲ್ಲಿ ಸಿಜೇರಿಯನ್ ಹೆರಿಗೆ ಮಾಡುವ ಆಸ್ಪತ್ರೆ ಗುರುತಿಸಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಮೊಹಮ್ಮದ್ ದ್ಹಹಿಸಿನ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತಿ ನೂತನ ಸಭಾಂಗಣದಲ್ಲಿ ಸೋಮವಾರ ಜರುಗಿದ ತೃತೀಯ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸರಕಾರಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಪ್ರತಿಶತ 40 ಅಥವಾ 48ರಷ್ಟು ಮಾತ್ರ ಸಿಜೇರಿಯನ್ ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಎರಡುಪಟ್ಟು ಅಧಿಕ ಸಿಜೇರಿಯನ್ ಹೆರಿಗೆಗಳಾಗುತ್ತವೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತವಿರಲಿ. ಭ್ರೂಣ ಹತ್ಯೆಯಂತಹ ದೂರುಗಳು ಸಹ ಮತ್ತೆ ಕೇಳಿ ಬರುತ್ತಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಶೇಷವಾಗಿ ಜಮಖಂಡಿ, ಮುದೋಳ, ಮಹಾಲಿಂಗಪುರ ಸುತ್ತಮುತ್ತಲಿನ ಪ್ರದೇಶಗಳತ್ತ ಗಮನ ಹರಿಸುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.ಬೀದಿನಾಯಿಗೆ ಶಸ್ತ್ರಚಿಕಿತ್ಸೆ ಮಾಡಿ:
ಸರ್ವೋಚ್ಚ ನ್ಯಾಯಾಲಯ ಆದೇಶದ ಅನ್ವಯ ಬೀದಿನಾಯಿ ಹಾವಳಿಗೆ ಕ್ರಮ ಕೈಗೊಳ್ಳಿ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿರುವುದು ಸಾಕಷ್ಟು ಸುದ್ದಿಯಾಗಿದೆ. ಈ ನಿಟ್ಟಿನಲ್ಲಿ ಸ್ಥಳಿಯ ಸಂಸ್ಥೆಗಳು ಮತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಯೋಜನೆ ರೂಪಿಸಿಕೊಂಡು, ಶೀಘ್ರವೇ ಟೆಂಡರ್ ಕರೆದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.ಜಿಪಂ ಸಿಇಒ ಶಶಿಧರ ಕುರೇರ್ ಮಾತನಾಡಿ, ಎಲ್ಲ ಅಧಿಕಾರಿಗಳು ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆ ಸರಿಯಾಗಿ ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಿ, ವಿನಾಕಾರಣ ಅನುದಾನ ಹಿಂತುರುಗಿ ಹೋಗದಂತೆ ನೋಡಿಕೊಳ್ಳಿ, ಅಂಗನವಾಡಿಗಳಿಗೆ ನಿಗದಿತ ಸಮಯಕ್ಕೆ ಹಾಲಿನ ಪೌಡರ್ ಪೂರೈಕೆಯಾಗಬೇಕು. ಮಕ್ಕಳು ಮೊಟ್ಟೆ ಸೇವಿಸುವಂತೆ ತಿಳಿವಳಿಕೆ ನೀಡಬೇಕು. ಮುಖ್ಯವಾಗಿ ಪಾಲಕರಲ್ಲಿ ಮೊಟ್ಟೆಯಲ್ಲಿ ಪೊಶಕಾಂಶಗಳಿರುತ್ತವೆ ಎಂಬುವುದನ್ನು ಮನವರಿಕೆ ಮಾಡಿ, ಶಾಲೆಗಳು ಮತ್ತು ಅಂಗನವಾಡಿ ಸುತ್ತಮುತ್ತ ವಿದ್ಯುತ್ ತಂತಿಗಳು ಜೋತಾಡುತ್ತಿದ್ದರೆ ಆದ್ಯತೆ ಮೇರೆಗೆ ತೆರವು ಮಾಡಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಯೋಜನಾ ನಿರ್ದೇಶಕ ಅಲ್ಲಮಪ್ರಭು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯಗಳಲ್ಲಿ ಸಾಕಷ್ಟು ಲೋಪದೋಷ ಕಂಡು ಬಂದಿರುತ್ತವೆ. ಬಸ್ ನಿಲ್ದಾಣಗಳಲ್ಲಿ ಸಹ ಅಸ್ತವ್ಯಸ್ಥೆಗಳು ಕಂಡು ಬಂದಿದ್ದು, ಪತ್ರಕರ್ತರು ಇವುಗಳತ್ತ ಗಮನಹರಿಸಿ ಎಂದು ತಿಳಿಸುತ್ತಿದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆದ್ಯತೆ ಮೇರೆಗೆ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡಬೇಕು.
- ಸಂಗಪ್ಪ ಜಿಲ್ಲಾಧಿಕಾರಿ