ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಮಾಡುವ ಉದ್ದೇಶದಿಂದ ಫೆ.16ರಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಜರುಗಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕರ ವಸೂಲಾತಿ ಗುರಿಯನ್ನು ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಬೇಕಿದೆ. ಪ್ರಸಕ್ತ ಸಾಲಿನ ಬೇಡಿಕೆಗೆ ಇಲ್ಲಿಯವರೆಗೆ ಶೇ.70.35ರಷ್ಟು ಮಾತ್ರ ಕರ ವಸೂಲು ಮಾಡಲಾಗಿದೆ. ಕರ ವಸೂಲಾತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ಇನ್ನು ಎರಡು ತಿಂಗಳು ಮಾತ್ರವಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಫೆ.16ರಂದು ನಡೆಯಲಿರುವ ವಿಶೇಷ ಅಭಿಯಾನದಲ್ಲಿ ಒಟ್ಟು ₹5 ಕೋಟಿ ವಸೂಲಾತಿಗೆ ಗುರಿ ನೀಡಲಾಗಿದ್ದು, ಪ್ರತಿಯೊಂದು ತಾಲೂಕಿಗೆ ಗುರಿ ನಿಗದಿಮಾಡಲಾಗಿದೆ. ಗುರಿ ಮುಟ್ಟುವ ರೀತಿಯಲ್ಲಿ ಕರ ವಸೂಲಾತಿ ಕಾರ್ಯ ನಡೆಯಬೇಕು. ಇದಕ್ಕಾಗಿ ಬಾಕಿ ಇರುವ ಪಟ್ಟಿಗಳನ್ನು ಸಿದ್ಧಪಡಿಸಿಕೊಳ್ಳುವ ಕೆಲಸ ತುರ್ತಾಗಿ ನಡೆಸಿ ಕರ ವಸೂಲಾತಿಗೆ ಕಾರ್ಯಪ್ರವೃತ್ತರಾಗಬೇಕು. ಪ್ರತಿಯೊಂದು ತಾಲೂಕಿಗೆ ಜಿಲ್ಲಾ ಮಟ್ಟದ ಮೂರು ಜನ ಅಧಿಕಾರಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಪಟ್ಟಿ ನೀಡಲು ತಿಳಿಸಿದರು.ಕರ ವಸೂಲಾತಿಯಲ್ಲಿ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮ ಪಂಚಾಯತಿ ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮ ಪಂಚಾಯತಿ ಇದೆ. ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮ ಪಂಚಾಯತಿ ತೃತೀಯ ಸ್ಥಾನದಲ್ಲಿದೆ. ಉಳಿದ ತಾಲೂಕಿನ ಗ್ರಾಮ ಪಂಚಾಯತಿಗಳು ಕರ ವಸೂಲಾತಿ ಮಾಡುತ್ತಿದ್ದು, ಗುರಿಗೆ ತಕ್ಕಂತೆ ಆಗುತ್ತಿಲ್ಲ. ಆದ್ದರಿಂದ ವಸೂಲಾತಿ ಪ್ರಗತಿ ಹೆಚ್ಚಿಸುವ ಕೆಲಸವಾಗಬೇಕೆಂದು ಪಿಡಿಒಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಕಿ ವೇತನ ಸಂಪೂರ್ಣವಾಗಿ ಪಾವತಿಯಾಗಬೇಕು. ಗ್ರಂಥಾಲಯ ಸಿಬ್ಬಂದಿ ವೇತನ ಪಾವತಿ ಸಹ ಬಾಕಿ ಉಳಿದಿದ್ದು, ಪಾವತಿಗೆ ಕ್ರಮ ವಹಿಸಬೇಕಿದೆ. 15ನೇ ಹಣಕಾಸು ಯೋಜನೆಯ ಅನುದಾನದಡಿ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಖರ್ಚು ಆಗಬೇಕು. ಸಿವಿಲ್ ಮತ್ತು ಮೆಟಲ್ ವರ್ಕ್ ಕಾಮಗಾರಿಗಳ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ಕ್ರಮವಹಿಸಬೇಕು. ಮಾರ್ಚ್ ಕೊನೆಯಲ್ಲಿ ಶೇ.100ರಷ್ಟು ಕೆಲಸ ಮುಗಿಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಯೋಜನಾ ನಿರ್ದೇಶಕ ಎಸ್.ಎಂ. ಕಾಂಬಳೆ ಸೇರಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಬೀದಿ ನಾಯಿಗಳಿಗೆ ಆಶ್ರಯ ತಾಣ:ಗ್ರಾಮೀಣ ಭಾಗದಲ್ಲಿಯೂ ಸಹ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಾಣ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಜಿಪಂ ಸಿಇಒ ಶಶಿಧರ ಕುರೇರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.