ಭೇದಭಾವವಿಲ್ಲದೇ ಹೋಳಿ ಬಣ್ಣದಲ್ಲಿ ಮಿಂದೆದ್ದ ಜನ

| Published : Mar 27 2024, 01:08 AM IST

ಸಾರಾಂಶ

ಗುತ್ತಲ ಪಟ್ಟಣದ ಹಿರಿಯರು, ಕಿರಿಯರು, ಯುವಕರು ಮಹಿಳೆಯರು ಎಂಬ ಭೇದವಿಲ್ಲದೆ ಒಬ್ಬರಿಗೊಬ್ಬರು ಬಣ್ಣವನ್ನು ಎರಚಿ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗುತ್ತಲ: ಪಟ್ಟಣದ ಹಿರಿಯರು, ಕಿರಿಯರು, ಯುವಕರು ಮಹಿಳೆಯರು ಎಂಬ ಭೇದವಿಲ್ಲದೆ ಒಬ್ಬರಿಗೊಬ್ಬರು ಬಣ್ಣವನ್ನು ಎರಚಿ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಚಿಕ್ಕ ಮಕ್ಕಳು ಬಣ್ಣ ಹಿಡಿದು ಬೀದಿಯಲ್ಲಿ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರೆ ನಂತರದಲ್ಲಿ ಎಲ್ಲ ಯುವಕ- ಯುವತಿಯರು ಭಾಗವಹಿಸಿ ಉತ್ಸಾಹದಿಂದ ಪರಸ್ಪರ ಸಹೋದರತೆ, ಬಾಂಧವ್ಯ ಮತ್ತು ಭಾತೃತ್ವವನ್ನು ಬೆಳೆಸುವ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ಅದೇ ರೀತಿ ಪ್ರತಿ ವರ್ಷದ ಸಂಪ್ರದಾಯದಂತೆ ಬನಶಂಕರಿ ದೇವಿ ಓಣಿಯ ಬಣ್ಣದ ಬ್ಯಾರೆಲ ಹೊಂದಿದ ಎತ್ತಿನ ಬಂಡಿಯು ಪಟ್ಟಣದ ಮೆರವಣಿಗೆ ಬೀದಿಗಳಲ್ಲಿ ಬಣ್ಣದ ನೀರನ್ನು ಎರಚುವುದು ಕಂಡು ಬಂದಿತು. ಹೋಳಿ ಹಬ್ಬದ ಅಂಗವಾಗಿ ಯುವಕರು ಹಲಗೆಗಳನ್ನು ಬಾರಿಸುತ್ತ ನೃತ್ಯ ಮಾಡುವದು ಕಂಡು ಬಂದರೆ, ಅನೇಕರು ವಿವಿಧ ರೀತಿಯ ಹಾಸ್ಯಮಯ ಮಾರು ವೇಷಗಳಾದ ಯುವತಿಯರು, ಉಪೇಂದ್ರ ಸ್ಪೇಷಲ್ ರೀತಿಯ ವೇಷದೊಂದಿಗೆ ಕೆಲವು ಯುವಕರು ಮನರಂಜನೆ ನೀಡುತ್ತಿದ್ದರು. ಹಲಗೆಯ ತಾಳಕ್ಕೆ ಅನೇಕರು ಹೆಜ್ಜೆ ಹಾಕುತ್ತಿದ್ದರು. ಬಿಸಿಲಿನ ತಾಪಕ್ಕೆ ಈ ಬಾರೀ ಹೋಳಿ ಹಬ್ಬದ ರಂಗು ಅಲ್ಪ ಕಡಿಮೆಯಾಗಿತ್ತು, ಅದರಲ್ಲಿ ಕೆಲ ವಿದ್ಯಾರ್ಥಿಗಳು ಪರೀಕ್ಷೆಯಿಂದ ಬಣ್ಣದಾಟದಿಂದ ದೂರ ಉಳಿಯುವಂತಾಯಿತು. ಪಟ್ಟಣದ ಬಸವರಾಜ ಗೌಳಿ ಎಂಬ ಯುವಕ ಶಿವನ ವೇಷವನ್ನು ಧರಿಸಿದ್ದನ್ನು ಮೆಚ್ಚಿ ಅನೇಕರು ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದರು.

ಹೋಳಿ ಹಬ್ಬದ ಮೆರವಣಿಗೆಯಲ್ಲಿ ಶಾಂತಿಯನ್ನು ಕಾಪಾಡಲು ಮುಂಜಾಗ್ರತೆ ಹಿನ್ನೆಲೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪೊಲೀಸರು, ಗೃಹ ರಕ್ಷಕದಳದವರನ್ನು ನಿಯೋಜನೆ ಮಾಡಲಾಗಿತ್ತು.