ಕನ್ನಡಪ್ರಭ ವಾರ್ತೆ ಹಾಸನ

ಶುಕ್ರವಾರ ನಡೆಯಲಿರುವ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಾಸನ ನಗರದಲ್ಲಿ ಗುರುವಾರ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು.

ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ದೇವಿಗೆರೆ ವೃತ್ತ, ಸ್ಲೇಟರ್ಸ್‌ ಹಾಲ್ ವೃತ್ತ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ, ಕುವೆಂಪು ರಸ್ತೆ ಸೇರಿದಂತೆ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿದ್ದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಎಷ್ಟೇ ಹೆಚ್ಚಾಗಿದ್ದರೂ ಖರೀದಿಗೆ ಹಿಂದೇಟು ಹಾಕದೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೂವು, ಹಣ್ಣು, ಬಾಳೆಕಂದು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಮಹಾವೀರ ವೃತ್ತದ ಬಳಿ ಗುರುವಾರ ಹೂವು ಮತ್ತು ಹಣ್ಣುಗಳ ಮಾರಾಟ ಭರ್ಜರಿಯಾಗಿ ನಡೆಯಿತು.

ಸೇವಂತಿಗೆ ಹೂವು ಒಂದು ಮಾರಿಗೆ ಸುಮಾರು ₹100ರಿಂದ 120, ಪುಟ್ಬಾಳೆ ಕೆ.ಜಿಗೆ 120 ರಿಂದ 170, ಬಾಳೆಕಂದು ಜೋಡಿಗೆ 50 ರಿಂದ 100 ಹಾಗೂ ತಾವರೆ ಹೂವು ಎರಡು ಕಡ್ಡಿಗೆ 100ರಂತೆ ಮಾರಾಟವಾಗುತ್ತಿತ್ತು. ಇನ್ನು ಹಬ್ಬದ ಪೂಜೆಗೆ ಪ್ರಮುಖವಾಗಿ ಬಳಸುವ ಹಣ್ಣುಗಳ ಬೆಲೆಯೂ ಏರಿಕೆಯಾಗಿತ್ತು. ಸೇಬು ಕೆ.ಜಿಗೆ 150 ರಿಂದ 250, ಮೂಸುಂಬೆ ಕೆ.ಜಿಗೆ 100ರಿಂದ 150 ಹಾಗೂ ದಾಳಿಂಬೆ ಕೆ.ಜಿಗೆ 100 ರಿಂದ 150 ರವರೆಗೆ ಮಾರಾಟವಾಗುತ್ತಿತ್ತು. ಹೂವಿನ ಹಾರಗಳ ಬೆಲೆ ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಿತ್ತು. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿ ಹಬ್ಬಕ್ಕೆಅಗತ್ಯವಾದ ವಸ್ತುಗಳನ್ನು ಖರೀದಿಸಿದರು. ಕೆಲವೆಡೆ ಹೂವು, ಹಣ್ಣು ಮತ್ತು ಬಾಳೆಕಂದು ಖರೀದಿಸಲು ನೂಕು ನುಗ್ಗಲಿನಲ್ಲಿ ನಿಂತಿರುವುದು ಕಂಡುಬಂತು. ಒಟ್ಟಿನಲ್ಲಿ ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಂಭ್ರಮ ಜನರಲ್ಲಿ ಕುಗ್ಗಿರಲಿಲ್ಲ. ಬೆಲೆ ಎಷ್ಟೇ ಇದ್ದರೂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಬೇಕೆಂಬ ಉತ್ಸಾಹದಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.