ಜಿಲ್ಲೆಯ ಶಿವತಾಣಗಳಲ್ಲಿ ಮಹಾಶಿವರಾತ್ರಿಯಂದು ಶಿವನ ದರ್ಶನಕ್ಕಾಗಿ ಜನತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಶಿವತಾಣಗಳಲ್ಲಿ ಮಹಾಶಿವರಾತ್ರಿಯಂದು ಶಿವನ ದರ್ಶನಕ್ಕಾಗಿ ಜನತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಗೋಕರ್ಣ, ಮುರ್ಡೇಶ್ವರ, ಯಾಣ, ಸಹಸ್ರಲಿಂಗ ಮತ್ತಿತರ ಕಡೆ ಜನಜಂಗುಳಿ ಕಂಡುಬಂತು. ಶಿವರಾತ್ರಿ ಸಂಭ್ರಮ ಎಲ್ಲೆಡೆ ಕಂಡುಬಂತು.

ಗೋಕರ್ಣದಲ್ಲಿ ಶನಿವಾರ ರಾತ್ರಿಯಿಂದಲೆ ಭಕ್ತರು ಸರದಿಯಲ್ಲಿ ನಿಂತು ಆತ್ಮಲಿಂಗದ ದರ್ಶನ ಪಡೆದರು. ರಥಬೀದಿ, ಮುಖ್ಯ ಕಡಲತೀರದಲ್ಲೂ ಜನಜಂಗುಳಿ ಕಂಡುಬಂತು.ಮುರ್ಡೇಶ್ವರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದುಬಂದರು. ಬೇರೆ ಬೇರೆ ರಾಜ್ಯಗಳಿಂದಲೂ ಜನತೆ ಆಗಮಿಸಿ ದೇವರ ದರ್ಶನ ಪಡೆದರು. ಗೋಕರ್ಣ, ಮುರ್ಡೇಶ್ವರಗಳಲ್ಲಿ ಪಾರ್ಕಿಂಗ್ ಗಾಗಿ ವಾಹನ ಸವಾರರು ಪರದಾಡುವಂತಾಯಿತು.

ಯಾಣ, ಕವಳಾಗುಹೆ, ಸಹಸ್ರಲಿಂಗ, ರಾಮಲಿಂಗೇಶ್ವರ ದೇವಾಲಯ ಹೀಗೆ ಶಿವತಾಣಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ಕಾರವಾರದ ಶೆಜ್ಜೇಶ್ವರ, ಕಾಲರುದ್ರೇಶ್ವರ, ಮಹಾದೇವ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿತ್ತು. ಭಕ್ತರು ಭಯ ಭಕ್ತಿಯಿಂದ ಶಿವನ ಆರಾಧನೆಯಲ್ಲಿ ತೊಡಗಿದ್ದರು. ನಗರದ ಪ್ರಮುಖ ದೇವಸ್ಥಾನಗಳಾದ ಶೇಜವಾಡದ ಶ್ರೀ ಶೆಜ್ಜೇಶ್ವರ, ಬಾಡದ ಮಹಾದೇವ, ಗಿಡ್ಡಾ ರಸ್ತೆಯ ಕಾಲರುದ್ರೇಶ್ವರ ಹಾಗೂ ಕಡವಾಡ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ಮುಂಜಾನೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಶಿವನ ಆತ್ಮಲಿಂಗದ ಪಂಚ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿನ ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಜನಸಾಗರವೇ ಹರಿದುಬಂದಿತ್ತು. ಗರ್ಭಗುಡಿಯಲ್ಲಿ ಶಿವಲಿಂಗಕ್ಕೆ ನಡೆಯುವ ಪೂಜೆ, ಅಭಿಷೇಕಗಳನ್ನು ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಕಣ್ತುಂಬಿಕೊಳ್ಳಲು ಅನುಕೂಲವಾಗುವಂತೆ ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾನೆಯಿಂದಲೇ ಆರಂಭವಾದ ವಿಶೇಷ ಪೂಜೆ ಮತ್ತು ಅಭಿಷೇಕಗಳು ಸಂಜೆಯವರೆಗೂ ಜರುಗಿದವು. ನೂರಾರು ಭಕ್ತರು ಸಾಲುಸಾಲಾಗಿ ನಿಂತು ದೇವರ ಕೃಪೆಗೆ ಪಾತ್ರರಾದರು.ಕೇವಲ ಕಾರವಾರ ಮಾತ್ರವಲ್ಲದೇ, ನೆರೆಯ ಗೋವಾ ರಾಜ್ಯದಿಂದಲೂ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಶಿವರಾತ್ರಿಯಂದು ಶಿವನ ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸರತಿ ಸಾಲಿನಲ್ಲಿ ನಿಂತು ಆತ್ಮಲಿಂಗದ ದರ್ಶನ ಪಡೆದರು. ಫಲಪುಷ್ಪಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಶಿವನಿಗೆ ನೆರವೇರಿಸಿದ ವಿವಿಧ ಅಭಿಷೇಕಗಳನ್ನು ಕಣ್ತುಂಬಿಕೊಂಡರು.

ದೇವಸ್ಥಾನಗಳ ಆವರಣದಲ್ಲಿ ಹೂವು, ಪತ್ರೆ, ಬಿಲ್ವಪತ್ರೆ, ಹಣ್ಣುಗಳ ಮಾರಾಟದ ಅಂಗಡಿ ಹಾಕಲಾಗಿತ್ತು. ದೇವಸ್ಥಾನಗಳನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು, ಶಿವರಾತ್ರಿಯ ಹಿನ್ನೆಲೆ ಭಕ್ತರು ಉಪವಾಸವಿರುವ ಕಾರಣ, ಕೆಲವು ದೇವಸ್ಥಾನ ಸಮಿತಿಗಳ ವತಿಯಿಂದ ಭಕ್ತರಿಗೆ ಫಲಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು.