ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರಾಜ್ಯ ಸರ್ಕಾರ ಜನಸ್ನೇಹಿ ಪೊಲೀಸ್ ಪರಿಕಲ್ಪನೆಯಲ್ಲಿ ಜಾರಿಗೆ ತಂದಿರುವ ಮನೆಮನೆಗೆ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹೇಳಿದರು.ತಾಲೂಕಿನ ರಾಜಘಟ್ಟ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಮನೆ ಮನೆಗೆ ಪೊಲೀಸ್ ಯೋಜನೆಗೆ ಚಾಲನೆ ಹಾಗೂ ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಜನತೆಗೆ ಪೊಲೀಸರು ಹತ್ತಿರವಾಗುವುದರಿಂದ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಸಹಾಯವಾಗಲಿದೆ. ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧ ಬೆಸೆದುಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು, ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿ, ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಪೊಲೀಸ್ ಸೇವೆ ಒದಗಿಸಬಹುದಾಗಿದೆ ಎಂದು ತಿಳಿಸಿದರು.ಅಪರಾಧಗಳಿಗೆ ಕಡಿವಾಣ:
ಮನೆ–ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜನರಲ್ಲಿ ಸುರಕ್ಷತಾ ಮನೋಭಾವ ಮೂಡಲಿದೆ. ಸೈಬರ್ ಅಪರಾಧಗಳ ಅರಿವು ಮೂಡಿಸಲಾಗುವುದು, ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆಯ ಸಮಗ್ರ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಪೊಲೀಸರೊಂದಿಗೆ ಆತ್ಮೀಯವಾಗಿ ಮಾತನಾಡಿ:
ಈ ಹಿಂದೆ ದೂರುದಾರರು ಠಾಣೆಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು, ಈಗ ಪೊಲೀಸರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಸ್ನೇಹಮಯಿಯಾಗಿದೆ. ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಕುಂದು ಕೊರತೆಗಳನ್ನು ವಿವರಿಸುವುದು ಅಗತ್ಯ ಎಂದ ಅವರು, ಅಪರಾಧಗಳ ಸ್ವರೂಪ ಈಗ ಡಿಜಿಟಲ್ ರೂಪ ಪಡೆದಿದೆ. ಡಿಜಿಟಲ್ ಅರೆಸ್ಟ್ ಮೂಲಕ ಹೆದರಿಸಿ ಹಣ ಕೀಳುವ, ಮೋಸ ಮಾಡುವ ಕೃತ್ಯಗಳು ಹೆಚ್ಚಾಗಿವೆ ಎಂದು ಹೇಳಿದರು.ಇ-ಬೀಟ್ ವ್ಯವಸ್ಥೆ:
ಡಿವೈಎಸ್ಪಿ ರವಿ ಮಾತನಾಡಿ, ಪ್ರತಿಯೊಂದು ಪೊಲೀಸ್ ಠಾಣೆಗಳ ಇ–ಬೀಟ್ ವ್ಯವಸ್ಥೆ ಅನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳ ಪಟ್ಟಿ ಮಾಡಿಕೊಂಡು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ, ಆಹವಾಲು ಆಲಿಸಲಿದ್ದಾರೆ. ಸಮಾಜದ ಸುರಕ್ಷತೆ ಹಾಗೂ ಸ್ವಸ್ಥ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ, ಸಮಾಜದಲ್ಲಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಿದ್ದಾರೆ ಎಂದರು.ಪರಿಶಿಷ್ಟರ ಕುಂದು ಕೊರತೆ ವಿನಿಮಯ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಬಹಳಷ್ಟು ದೂರುಗಳು ಬಂದವು. ಶಾಲೆಯಲ್ಲಿ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಶಾಲಾ ವಿದ್ಯಾರ್ಥಿ ಹೇಳಿದರು.ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ, ನಗರ ಠಾಣೆಯ ಇನ್ಸಪೆಕ್ಟರ್ ಅಮರೇಶ್ ಗೌಡ, ಮಹಿಳಾ ಠಾಣೆ ಇನ್ಸಪೆಕ್ಟರ್ ನವೀನ್ ಕುಮಾರ್, ದೊಡ್ಡ ಬೆಳವಂಗಲ ಠಾಣೆಯ ಇನ್ಸಪೆಕ್ಟರ್ ಕಲ್ಲಪ್ಪ ಹೊಸಹಳ್ಳಿ ಠಾಣೆಯ ರಾವ್ ಗಣೇಶ ಹಾಗೂ ಸಿಬ್ಬಂದಿ, ದಲಿತ ಮುಖಂಡರು ಹಾಜರಿದ್ದರು.