ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಬಿಜಿಕೆರೆ ಬಸವರಾಜ
ಹೆಲ್ಮೆಟ್ ಹಾಕದೆ ಬೈಕ್ ಚಲಾಸಿಸುವುದು ಬೇಡ, ಡ್ರಿಂಕ್ ಅಂಡ್ ಡ್ರೈವ್ ಬೇಡ, ಬಾಲ್ಯ ವಿವಾಹ ಬೇಡ, ಬಾಲ ಕಾರ್ಮಿಕತೆ ಬೇಡ, ಸೈಬರ್ ವಂಚಕರ ಕುರಿತು ಜಾಗೃತರಾಗಿ, ರಸ್ತೆ ನಿಯಮಗಳ ಪಾಲಿಸಿ ಇವು ತಾಲೂಕಿನ ರಾಂಪುರ ಪೋಲಿಸ್ ಠಾಣೆಯ ಆವರಣದ ಗೋಡೆಗಳಲ್ಲಿ ಕಾಣಸಿಗುವ ಬರಹಗಳು.ಹೌದು ತಾಲೂಕಿನ ರಾಂಪುರ ಪೋಲೀಸ್ ಠಾಣೆ ಜನಸ್ನೇಹಿಯಾಗಿ ಗಮನ ಸೆಳೆಯುತ್ತಿದೆ. ಉತ್ತಮ ಕುಡಿಯುವ ನೀರು, ನೆರಳು, ವಾಹನ ಪಾರ್ಕಿಂಗ್ ಸೇರಿದಂತೆ ಠಾಣೆಗೆ ಆಗಮಿಸುವ ಜನರಿಗೆ ಉತ್ತಮ ಸೆವೆಯ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೆ ಸುತ್ತಲೂ ಗಿಡ ಮರಗಳ ನೆಟ್ಟು ಸುಣ್ಣ ಬಣ್ಣ ಬಳಿದು ಕಾನೂನಿನ ಅರಿವು ನೆರವಿನ ಚಿತ್ರಗಳಿರುವ ಬರಹಗಳ ಮೂಲಕ ಪೋಲೀಸ್ ಠಾಣೆಯನ್ನು ಜನಸ್ನೇಹಿಯನ್ನಾಗಿಸಲಾಗಿದೆ. ಇದು ಮೊಳಕಾಲ್ಮುರು ಮತ್ತು ಚಳ್ಳಕೆರೆ ವಿಭಾಗದಲ್ಲಿ ಪ್ರಥಮ ಎನ್ನಲಾಗಿದೆ.
ಪ್ರತಿಯೊಬ್ಬರಿಗೂ ಕಾನೂನು ನಿಯಮಗಳನ್ನು ತಿಳಿಸಲು ಠಾಣೆಯ ಸುತ್ತಲಿನ ಗೋಡೆಗಳ ಮೇಲೆ ಅಪಘಾತ, ಪೋಕ್ಸೋ, ಬಾಲ್ಯವಿವಾಹ, ಬಾಲ್ಯ ಕಾರ್ಮಿಕತೆ, ಹೆಲ್ಮೆಟ್, ಡ್ರಗ್ಸ್, ಡಿಜಿಟಲ್ ಅರೆಸ್ಟ್, ಮೋಟಾರು ಕಾಯಿದೆ ಸೇರಿದಂತೆ ಕಾನೂನು ಮಾಹಿತಿಗಳನ್ನು ಸಾರುವ ಬಗೆ ಬಗೆಯ ಬರಹಗಳ ಬರೆಸಿರುವ ಪೋಲೀಸ್ ಇಲಾಖೆ ಸಾರ್ವಜನಿಕರನ್ನು ಜಾಗೃತರನ್ನಾಗಿಸುವ ಕಾರ್ಯ ಮಾಡಿದ್ದಾರೆ.ಸೋಲಾರ್ ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಈ ಬರಹಗಳನ್ನು ಬರೆಸಲಾಗಿದೆ. ಠಾಣೆಗೆ ಆಗಮಿಸುವ ಜನರನ್ನು ಕಾನೂನು ಅರಿವು ಮೂಡಿಸುವ ಬರಹಗಳು ಸದಾ ಸ್ವಾಗತಿಸುತ್ತಿವೆ. ಜನಾಕಾರ್ಷಣೀಯ ಚಿತ್ರಗಳು ಗಮನಾರ್ಹವಾಗಿ ಕಾಣಸಿಗುತ್ತಿವೆ. ಕಾನೂನು ಮಾಹಿತಿಗಳು ಸುಲಭವಾಗಿ ಕೈಗೆಟುಕುವಂತಾಗಿದ್ದು ದಾರಿಯಲ್ಲಿ ಸಾಗುವ ಜನರ ಕುತೂಹಲದಿಂದ ಗಮನಿಸುವುದು ಕಾಣಸಿಗುತ್ತಿದೆ.
*ಜಾಗೃತಿ ಬರಹಗಳು: ಪೋಲೀಸ್, ಜಡ್ಜ್, ಸಿಬಿಐ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಪೋನು ಕರೆಗಳು ಯಾವುದೇ ಬ್ಯಾಂಕಿನವರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಅಂತಹ ಕರೆಗಳು ಸೈಬರ್ ವಂಚಕರಾಗಿರಬಹುದು. ಅಂತಹ ಕರೆಗಳು ಬಂದಲ್ಲಿ ಎಚ್ಚರವಹಿಸಿ. ಅನದೀಕೃತ ಲೋನುಗಳಲ್ಲಿ ಸಾಲ ಪಡೆದು ಮೋಸ ಹೋಗದಿರಿ, ಸರಗಳ್ಳರ ಬಗ್ಗೆ ಎಚ್ಚರ ವಹಿಸಿ,ಅನ್ಯಾಯಕ್ಕೊಳಗಾದ ಮಕ್ಕಳಿಗೆ ನ್ಯಾಯ ಒದಗಿಸಿ, ಅಪ್ರಾಪ್ತರಿಗೆ ವಿವಾಹ ಮಾಡುವುದು ಅಪರಾಧ, ಮಕ್ಕಳನ್ನು ರಕ್ಷಣೆ ಮಾಡಿ, ಬಾಲ ಕಾರ್ಮಿಕತೆಗೆ ದೂಡದೆ ಶಾಲೆಗೆ ಕಳಿಸಿ, ಮಕ್ಕಳ ಕೈಲಿ ಮೊಬೈಲ್ ಬದಲು ಪುಸ್ತಕ ನೀಡಿ, ಸಂಚಾರ ನಿಯಮ ಪಾಲಿಸಿ ಅಪಘಾತ ತಪ್ಪಿಸಿ, ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ, ಮಾದಕ ವಸ್ತುಗಳನ್ನು ಸೇವಿಸಬೇಡಿ, ಅಮೂಲ್ಯ ಜೀವ ಹಾಳು ಮಾಡಬೇಡಿ, ಗಾಂಜಾ ಸೇವನೆ ನಿಮ್ಮ ಜೀವನದ ಕೊನೆ, ಜಾತಿಯತೆ ನಿರ್ಮೂಲನೆ ಮಾಡಿ, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಜೀವ ಕಾಪಾಡಿ ಎನ್ನುವ ಹತ್ತು ಹಲವು ಬಗೆಯ ಜಾಗೃತಿ ಬರಹಗಳು ನೋಡುಗರ ಗಮನ ಸೆಳೆಯುತ್ತಿವೆ.
*ಸಾವಿರಾರು ವಿದ್ಯಾರ್ಥಿಗಳು ಭೇಟಿ: ಆಕರ್ಷಣೀಯ ಬರಗಳಿಂದಾಗಿ ಪೋಲೀಸ್ ಠಾಣೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿ ಗೋಡೆ ಬರಹಗಳನ್ನು ಕುತೂಹಲದಿಂದ ನೋಡುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ. ಠಾಣಾ ವ್ಯಾಪ್ತಿಯ ನಾನಾ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಭೇಟಿ ನೀಡಿ ಸುತ್ತಲಿನ ಗೋಡೆ ಬರಹಗಳ ವೀಕ್ಷಣೆಯ ಜನತೆಗೆ ಅಲ್ಲಿನ ಪೋಲೀಸ್ ಅಧಿಕಾರಿಗಳಿಂದ ಕಾನೂನು ಅರಿವನ್ನು ಪಡೆದುಕೊಂಡಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕಾನೂನಿನ ಸರಳ ಮತ್ತು ಸುಲಭವಾಗಿ ದೊರಕುವಲ್ಲಿ ಜನಸ್ನೇಹಿ ಪೋಲೀಸ್ ಠಾಣೆ ಸಾಕ್ಷಿಯನ್ನಾಗಿಸಿದೆ.