ಉತ್ತರ ಕರ್ನಾಟಕದವರು ಹೃದಯ ಶ್ರೀಮಂತಿಕೆ ಉಳ್ಳವರು

| Published : Apr 26 2024, 12:52 AM IST

ಸಾರಾಂಶ

ಶಹಾಪುರದ ಇಬ್ರಾಹಿಂಪೂರ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಸಾಯಿ ಮಂದಿರದ 2ನೇ ಜಾತ್ರಾ ಮಹೋತ್ಸವಕ್ಕೆ ನಟ ಕ್ರೇಜಿಸ್ಟಾರ್‌ ಚಾಲನೆ

ಕನ್ನಡಪ್ರಭ ವಾರ್ತೆ ಶಹಾಪುರ

ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕದವರ ಪಾತ್ರ ಪ್ರಮುಖವಾಗಿದೆ. ಉತ್ತರ ಕರ್ನಾಟಕದ ಜನತೆ ಹೃದಯ ಶ್ರೀಮಂತಿಕೆಯುಳ್ಳವರು. ಮಾತು ಒರಟಾದರೂ, ಅದರಲ್ಲೇ ನಿಜವಾದ ಪ್ರೀತಿ ಅಡಗಿದೆ, ಆ ಪ್ರೀತಿ, ನಿಮ್ಮೆಲ್ಲರ ಸದಾಶಯ ನನ್ನ ಮೇಲಿರಲಿ ಎಂದು ನಟ, ನಿರ್ಮಾಪಕ, ಕ್ರೇಜಿ ಸ್ಟಾರ್ ರವಿಚಂದ್ರನ್‌ ಹೇಳಿದರು.

ತಾಲೂಕಿನ ಇಬ್ರಾಹಿಂಪೂರ ಗ್ರಾಮದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಸಾಯಿ ಮಂದಿರದ 2ನೇ ಜಾತ್ರಾ ಮಹೋತ್ಸವದ ಅಂಗವಾಗಿ, ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನನಗೆ ಬಾಲ್ಯದಲ್ಲಿಯೇ ನಮ್ಮ ತಂದೆ-ತಾಯಿ, ಪ್ರೀತಿಯಿಂದ ಬೆಳೆಸಿ ಅವರ ಸದಾಶಯದಂತೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ಸುದೀರ್ಘ ಪಯಣದಲ್ಲಿ ಏಳು-ಬೀಳುಗಳನ್ನು ಕಾಣುವ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಆಧುನಿಕ ತಂತ್ರಜ್ಞಾನ ಸ್ಪರ್ಶ ನೀಡುವ ಮೂಲಕ ಹೊಸ ಕಾಯಕಲ್ಪ ನೀಡಿದ್ದೇನೆ. ಸಮಯ ಹಾಗೂ ಪರಿಶ್ರಮದ ಕೆಲಸ ನಂಬಿ ಇನ್ನೂ ಸಿನಿಮಾ ರಂಗದಲ್ಲಿ ಜೀವಂತವಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.

ಇಂದು ವರನಟ ಡಾ. ರಾಜಕುಮಾರ ಅವರ ಹುಟ್ಟುಹಬ್ಬ, ನಾನು ಮೊದಲು ರಾಜಕುಮಾರ ಜೊತೆ ನಟಿಸುವ ಮೂಲಕ ಸಿನಿಮಾಗಳಲ್ಲಿ ನಟನಾಗಿ ಬೆಳೆದಿದ್ದೇನೆ ಎಂದರು.

ಇಲ್ಲಿನ ಸಾಯಿಬಾಬಾ ಅವರ ಆಧ್ಯಾತ್ಮಿಕ ಶಕ್ತಿ ಹಾಗೂ ಶುದ್ಧ ಮನಸ್ಸಿನ ಪ್ರೇಮದಿಂದ ನಾನು ಇಲ್ಲಿಗೆ ಆಗಮಿಸಲು ಸಾಧ್ಯವಾಗಿದೆ. ಯುವಕರಾಗಿರುವ ದಿಗ್ಗಿಯವರು ಇನ್ನು ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಈ ಭಾಗದ ಜನರಿಗೆ ತಮ್ಮದೇ ಆದ ಕೊಡುಗೆ ನೀಡಲಿ, ಆ ಭಗವಂತ ಹಾಗೂ ನೀವು ಅಗತ್ಯ ಸಹಕಾರ ನೀಡಿ ಎಂದರು.

ವೇದಿಕೆ ಮೇಲೆ ತಿಂಥಣಿಯ ಕನಕ ಗುರು ಪೀಠದ ಪೀಠಾಧಿಪತಿ ಸಿದ್ದರಾಮನಂದಪುರಿ ಮಹಾಸ್ವಾಮಿಜಿ, ಹುಲಿಜಂತಿಯ ಮಾಳಿಂಗರಾಯ ಮಹಾರಾಜರು, ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮಿಜಿ, ಮಾಲಹಳ್ಳಿಯ ಕೆಂಚರಾಯ ಪೂಜಾರಿ, ಗೊಲ್ಲಪಲ್ಲಿಯ ಶ್ರೀಗಳಾದ ವರದಾನೇಶ್ವರ, ಚಿಗರಳ್ಳಿಯ ಸಿದ್ದ ಕಬೀರಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ, ಬಿಜೆಪಿ ಮುಖಂಡರಾದ ನಿತೀನ ಗುತ್ತೇದಾರ, ಲಲಿತಾ ಅನಪೂರ, ಡಾ. ಎಸ್.ಬಿ. ಕಾಮರಡ್ಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾರಾಜ ದಿಗ್ಗಿ, ಕಾಯದರ್ಶಿ ಸಿದ್ದಪ್ಪಾಜಿ, ಭೀಮಾಶಂಕರ ದೋರನಹಳ್ಳಿ, ನಿಜಗುಣ, ಲಕ್ಷ್ಮಿಕಾಂತ ಪಾಟೀಲ್ ಮದ್ರಿಕಿ, ಮಲ್ಲಣಗೌಡ ಹಗರಟಗಿ, ಜಹಿರುದ್ದೀನ್ ಸವೇರಾ, ಭೀಮಾಶಂಕರ ಇಬ್ರಾಹಿಂಪೂರ, ಖಾಜಾ ಮೈನುದ್ದಿನ್ ನಾಯ್ಕಲ್, ಹೊಸದುರ್ಗ ದಿಲೀಪಕುಮಾರ ಸೇರಿದಂತೆ ಹಲವು ಮಠಾಧೀಶರು, ಮುಖಂಡರು ಇದ್ದರು. ಕಲಾವಿದರಿಗೆ ವೇದಿಕೆ ಕಲ್ಪಿಸಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ, ಮಾನವ ಸಂಪನ್ಮೂಲಕ್ಕೆ ಯಾವುದೆ ಕೊರತೆಯಿಲ್ಲ. ಆದರೆ, ಅವರಿಗೆ ಸೂಕ್ತ ಸಹಾಯ, ಪ್ರೋತ್ಸಾಹ ನೀಡಿ, ವೇದಿಕೆ ಕಲ್ಪಿಸಿ ಕೊಡಬೇಕು. ಅಂದಾಗ ಮಾತ್ರ ಅವರು ಕೂಡ ತಮ್ಮ ಕಲೆ ಪ್ರದರ್ಶನ ಮಾಡಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.