ಮೇ 9ರಂದು ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವದ ಹಿನ್ನಲೆ ಗುರುವಾರ ಸಂಸದ ಗೋವಿಂದ ಕಾರಜೋಳ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ರಾಜ್ಯದ 29 ಸಾವಿರ ಹಳ್ಳಿಗಳಿಂದ ಜನತೆ ಆಗಮಿಸಲಿದ್ದಾರೆಂದು ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಅಭಿಮಾನೋತ್ಸವದ ಹಿನ್ನಲೆ ಗುರುವಾರ ಪೂರ್ವ ಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯದ ವಿವಿಧ ಮೂಲೆಗಳಿಂದ 8 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಊಟ ಸೇರಿದಂತೆ ಎಲ್ಲವನ್ನು ನಿರ್ವಹಿಸಲಾಗುತ್ತಿದೆ ಎಂದರು.

ಯಡಿಯೂರಪ್ಪ ಎಂದರೆ ರೈತ ಹೋರಾಟಗಾರ ಎಂದೇ ರಾಜ್ಯದ ಜನತೆ ಗುರುತಿಸುತ್ತಾರೆ. ಹಿಂದುಳಿದವರು, ರೈತರು, ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದ ಬಹು ದೊಡ್ಡ ಶಕ್ತಿ ಅವರು. ಹೋರಾಟಗಾರ ರಾಜಕೀಯವಾಗಿಯೂ ಯಶ ಕಾಣಬಹುದೆಂಬುದಕ್ಕೆ ಯಡಿಯೂರಪ್ಪ ತಾಜಾ ಉದಾಹರಣೆ. ಜನ ಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿ ಇಟ್ಟಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ದಲಿತರು, ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಬಡವರ ಪರವಾಗಿ ಕೆಲಸ ಮಾಡುವಾಗ ಎದುರಾದ ಅನೇಕ ಸವಾಲುಗಳ ಸಮರ್ಥವಾಗಿ ನಿರ್ವಹಿಸಿದ್ದಾರೆಂದು ಹೇಳಿದರು.

ಕಾರ್ಯಕ್ರಮಕ್ಕೆ ಬರಲು ರಾಜ್ಯದ 29,000 ಹಳ್ಳಿಗಳಿಂದ ಜನತೆ ಉತ್ಸುಕರಾಗಿದ್ದಾರೆ. ರೈತರು, ದೇವದಾಸಿಯರು, ದಲಿತರು ಕಾರ್ಮಿಕರು, ಅಭಿಮಾನಿಗಳು ಹಿತೈಷಿಗಳು ಪಾಲ್ಗೊಳ್ಳಲು ಪಾಸ್‌ಗಳ ಕೇಳುತ್ತಿದ್ದಾರೆ. ಚಿತ್ರದುರ್ಗದಲ್ಲಿ ಮೇ 8ರ ಸಂಜೆ ಯಡಿಯೂರಪ್ಪರವರ ಪುರಪ್ರವೇಶವಾಗಲಿದೆ. ಈ ಸಮಯದಲ್ಲಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಆನಾವರಣ ಮಾಡುವಂತಹ ಕಾರ್ಯಕ್ರಮ ಇದಾಗಲಿದೆ. ಚಿತ್ರದುರ್ಗ ಐತಿಹಾಸಿಕ ನಾಡಾಗಿದೆ. ಸುಮಾರು 76 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಕುಡಿಯುವ ನೀರು, ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಜನತೆ ಸ್ವಯಂ ಪ್ರೇರಣೆಯಿಂದ ಬಂದು ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ ಕುಮಾರಸ್ವಾಮಿ, ಸಹಾ ಪ್ರಬಾರಿ ಎ.ಮುರಳಿ, ಕಾಡುಗೊಲ್ಲ ರಾಜ್ಯಾಧ್ಯಕ್ಷ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮೋಹನ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ದಗ್ಗೆ ಶಿವಪ್ರಕಾಶ್, ಯವಮೊರ್ಚಾದ ಚಳ್ಳಕೆರೆ ಮಂಜು, ಯಶವಂತ್, ಅರುಣ್ ಉಪಸ್ಥಿತರಿದ್ದರು.