ಮಹಾನಗರ ಸೇರಿದಂತೆ ಎಲ್ಲೆಡೆ ಭಾನುವಾರ ಮಹಾ ಶಿವರಾತ್ರಿ ಹಬ್ಬವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಮಠ-ಮಂದಿರಗಳೆಲ್ಲ ಭಕ್ತರಿಂದ ತುಂಬಿ ಹೋಗಿದ್ದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಹುಬ್ಬಳ್ಳಿ: ಮಹಾನಗರ ಸೇರಿದಂತೆ ಎಲ್ಲೆಡೆ ಭಾನುವಾರ ಮಹಾ ಶಿವರಾತ್ರಿ ಹಬ್ಬವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಮಠ-ಮಂದಿರಗಳೆಲ್ಲ ಭಕ್ತರಿಂದ ತುಂಬಿ ಹೋಗಿದ್ದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿವಿಧೆಡೆ ಇರುವ ಈಶ್ವರ ಮತ್ತು ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯನ್ನು ಸಡಗರದಿಂದ ಆಚರಿಸಲಾಯಿತು. ಬಹುತೇಕ ದೇವಸ್ಥಾನಗಳನ್ನು ವಿದ್ಯುತ್‌ ದೀಪ, ತಳೀರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ತಡರಾತ್ರಿಯ ವರೆಗೆ ಭಕ್ತರು ಶಿವ, ಈಶ್ವರ ಹಾಗೂ ರಾಮಲಿಂಗೇಶ್ವರನ ದರ್ಶನ ಪಡೆದುಕೊಂಡರು. ದೇವಸ್ಥಾನಗಳಲ್ಲಿ ಶಿವನಾಮ ಸ್ಮರಣೆ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ರಾತ್ರಿ ಜಾಗರಣೆ ನಡೆಯಿತು. ಬಹುತೇಕರು ಶಿವರಾತ್ರಿಯ ನಿಮತ್ತ ಉಪವಾಸ ಮಾಡಿದ್ದರಿಂದ ಬಾಳೆಹಣ್ಣು, ದ್ರಾಕ್ಷಿ ಹಾಗೂ ಕರ್ಜೂರ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಸುವ ಮೂಲಕ ಭಕ್ತಿ ಮೆರೆದರು.

ರಾಮಲಿಂಗೇಶ್ವರ ದೇವಸ್ಥಾನ

ಇಲ್ಲಿನ ಉಣಕಲ್ಲ ಬಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಅಲಂಕಾರ ಪೂಜೆ, ಮಹಾಮಂಗಳಾರತಿ ಹಾಗೂ ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀರಾಮಲಿಂಗೇಶ್ವರನ ದರ್ಶನ ಪಡೆದುಕೊಂಡರು.

ಶಿವಪುರದ ಶಿವ

ಗೋಕುಲ ರಸ್ತೆಯ ರಾಜಧಾನಿ ಕಾಲನಿ ಬಳಿಯ ಶಿವಪುರ ಕಾಲನಿಯಲ್ಲಿ ಪ್ರತಿಷ್ಠಾಪಿತ ಮಹಾನಗರದ ಅತಿ ದೊಡ್ಡ ಶಿವನಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಶಿವನ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಸ್ಥಳೀಯರು ವಿಶೇಷ ಪ್ರಸಾದ, ಅಭಿಷೇಕವನ್ನು ವಿತರಿಸಿದರು.

ಉಣಕಲ್‌ ಬಳಿ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಸರದಿಯ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡರು. ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ದೇವಸ್ಥಾನ, ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನ, ಹಳೆಯ ಕೋರ್ಚ್‌ ವೃತ್ತದ ಸಾಯಿ ಮಂದಿರ, ಕೇಶ್ವಾಪುರದ ಪಾರಸ್ವಾಡಿ ಕಾಶಿ ವಿಶ್ವನಾಥ ದೇವಸ್ಥಾನ, ಗೋಕುಲ ರಸ್ತೆಯಲ್ಲಿರುವ ರಾಜಧಾನಿ ಕಾಲನಿಯ ಗಣೇಶ ಮತ್ತು ಈಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಅಲಂಕಾರ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು.