ಸಾರಾಂಶ
ಸಂಪನ್ಮೂಲ ವ್ಯಕ್ತಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಶಿಕ್ಷಕರು ಶಾಲಾ ಮಕ್ಕಳಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಮುಂದಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಎಲ್ಲ ಆಚರಣೆಗಳೂ ಜೀವಂತವಾಗಿವೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
21ನೇ ಶತಮಾನದಲ್ಲೂ ವೈಜ್ಞಾನಿಕವನ್ನು ಮರೆತು ಕಂದಾಚಾರ ಮತ್ತು ಮೌಢ್ಯಾಚರಣೆಗೆ ಜನರು ಮಾರು ಹೋಗಿರುವುದು ವಿಷಾದನೀಯ ಎಂದು ಡಿವೈಎಸ್ಪಿ ವಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕೋಟೆ ರಸ್ತೆಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶನಿವಾರ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ವೈಜ್ಞಾನಿಕ ಮನೋವೃತ್ತಿ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಬೇರೂರಿರುವ ಕಂದಾಚಾರ ಮತ್ತು ಮೌಢ್ಯ ನಿವಾರಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.ಸಂಪನ್ಮೂಲ ವ್ಯಕ್ತಿಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಶಿಕ್ಷಕರು ಶಾಲಾ ಮಕ್ಕಳಿಗೆ ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಮುಂದಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಎಲ್ಲ ಆಚರಣೆಗಳೂ ಜೀವಂತವಾಗಿವೆ. ವೈಜ್ಞಾನಿಕ ಸಮಾಜದಲ್ಲಿ ಕೆಲವರು ಮೌಢ್ಯವನ್ನು ವೃತ್ತಿಯಾಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೌಢ್ಯನಂಬಿಕೆ ಅನಾಚಾರ ಎಂದು ತಿಳಿದಿದ್ದರೂ ನಮಗೆ ಗೊತ್ತೊ, ಗೊತ್ತಿಲ್ಲದೇನೋ ಎಂಬಂತೆ ಕೆಲವೊಂದು ಬಾರಿ ಎಲ್ಲರೂ ಪಾಲಿಸುತ್ತಿದ್ದೇವೆ. ಆದರೆ, ವಿಜ್ಞಾನ ಮುಂದುವರೆದ ಕಾಲದಲ್ಲಿ ಗ್ರಹಗಳ ಮೇಲೆ ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲೂ ಇಂಥ ಆಚರಣೆ ಸರಿಯಲ್ಲ. ತಂತ್ರಜ್ಞಾನ ಮತ್ತು ವಿಜ್ಞಾನ ಬೆಳೆದಂತೆಲ್ಲ ಇನ್ನೂ ಕೆಲ ಅನಿಷ್ಟ ಪದ್ಧತಿ ಜೀವಂತಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರೇವಣ್ಣ ಮಾತನಾಡಿ, ನಮ್ಮ ಕಾರ್ಯಾಗಾರ ದೇವರ ವಿರುದ್ಧವಲ್ಲ. ಬದಲಾಗಿ ದೇವರ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧವಾಗಿದೆ. ಜನರು ಜಾಗೃತಿಗೊಳ್ಳಬೇಕಾಗಿದೆ ಎಂದರು.
ಈ ವೇಳೆ ತಾಪಂ ಇಒ ಎಚ್.ಜಿ.ಶ್ರೀನಿವಾಸ್, ತಾಲೂಕು ಘಟಕದ ಅಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಮಹದೇವಯ್ಯ, ಸಿದ್ದರಾಜು, ಶಿವಕುಮಾರ್, ಮಹೇಶ್, ಎನ್.ಮಹದೇವ, ವರಲಕ್ಷ್ಮಿ, ಶೈಲಜಾ, ಶೋಭಾ, ಪಾಪಣ್ಣ, ಅಂಜನಾ ಉಪಸ್ಥಿತರಿದ್ದರು.