ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ರಾಜ್ಯದ ಬಡವರಿಗೆ ಸ್ವಂತ ಸೂರು ಒದಗಿಸಿ ಬಡವರನ್ನು ಸಶಕ್ತಗೊಳಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ಸರ್ಕಾರದ ಸಮೀಪ ತಂದಿದ್ದು, ಜನರಲ್ಲಿಯೂ ನಮ್ಮ ಸರ್ಕಾರವೆಂಬ ಅಭಿಮಾನ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜನಗಜೀವನರಾಂ ಸಭಾ ಭವನದಲ್ಲಿ ಕಂದಾಯ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಿ ಜೀವನ ಸಾಗಿಸುತ್ತಿರುವ ಜನರಿಗೆ ಅಕ್ರಮ ಸಕ್ರಮ ಫಲಾನುಭವಿಗಳ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಗ್ರಾಮೀಣ ಭಾಗದ 183 ಫಲಾನುಭವಿಗಳಿಗೆ ಹಾಗೂ ನಗರದ 21 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇಷ್ಟು ದಿನ ಆತಂಕದಲ್ಲಿ ಜೀವನ ನಡೆಸುತ್ತಿರುವ ಕುಟುಂಬಗಳು ಇಂದಿನಿಂದ ಮಾಲೀಕರಾಗಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಲವಾರು ಜನರಿಗೆ ಹಕ್ಕುಪತ್ರ ದೊರೆತಿಲ್ಲ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ, ಸರ್ಕಾರಿ ಜಮೀನು ಸೇರಿದಂತೆ ಒಟ್ಟು 3200 ಜನರಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಅಕ್ರಮ ಸಕ್ರಮ ಹಕ್ಕುಪತ್ರ ಪಡೆಯಲು ಹೆಚ್ಚಿನ ಜನರು ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ ಅಂತವರಿಗೆ ಇನ್ನೊಮ್ಮೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.ಬಡವರು ಅನ್ನಕ್ಕಾಗಿ ಮತ್ತೊಬ್ಬರ ಬಳಿ ಕೈ ಚಾಚಬಾರದು ಎನ್ನುವ ಉದ್ದೇಶದಿಂದ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಅಧಿಕಾರಿಗಳು ಬಡವರ ಬಗ್ಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆಯಡಿ ಪ್ರತಿಯೊಬ್ಬರಿಗೂ ಅನ್ನ ನೀಡುವ ಮಹತ್ವದ ಯೋಜನೆಗೆ ಮುಂದಾಗಿದ್ದು ನಮ್ಮ ಸರ್ಕಾರ ಎಂದ ಅವರು, ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ಪ್ರಾಮಾಣಿಕತೆಯಿಂದ ತಲುಪಿಸಬೇಕು ಎಂದು ಸೂಚಿಸಿದರು.ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ಸರ್ಕಾರ 2013ರಿಂದ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದಿದೆ. ಇದರಿಂದ ವಸತಿ ರಹಿತರಿಗೆ ಹೆಚ್ಚು ಅನುಕೂಲವಾಗಿದೆ. ಅರ್ಹ ಫಲಾನುಭವಿಗಳು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ನೂತನ ಸರ್ಕಾರದ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಈ ಪೈಕಿ ಈ ಆಫೀಸ್ ಶೇ.100 ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತಮ್ಮ ಅರ್ಜಿಯ ಪ್ರತಿಯೊಂದು ಹಂತವನ್ನು ಅರಿತುಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕಾರ್ಯಸ್ಥಾನ ಗ್ರಾಮದಲ್ಲಿ ಕಾರ್ಯನಿರ್ವ ಹಿಸುವಂತೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಉತಾರೆಗಳ ರೆಕಾರ್ಡ್ ರೂಂ ಡಿಜಿಟಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು ಇನ್ನೆರಡು ತಿಂಗಳಲ್ಲಿ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಈ ವೇಳೆ ಒಟ್ಟು 204 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಯಿತು. ತಾಪಂ ಇಒ ಸಂಜೀವ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಅಧಿಕಾರಿಗಳಾದ ಮೋಹನ ಕೋರಡ್ಡಿ, ಬಿಇಒ ಎಸ್.ಎಂ.ಮುಲ್ಲಾ, ಗೋವಿಂದ ರಾಠೋಡ, ರೂಗಿ, ಅಕ್ಕಿಮರಡಿ, ಕಿಶೋರಿ, ಕುಳಲಿ ಗ್ರಾಮಸ್ಥರು ಉಪಸ್ಥಿತರಿದ್ದರು.