ಮುದ್ರಣ ಮಾಧ್ಯಮದ ಮೇಲೆ ಜನರ ನಂಬಿಕೆ ಹೆಚ್ಚು

| Published : Jul 17 2025, 12:30 AM IST

ಸಾರಾಂಶ

ದೃಶ್ಯ ಮಾಧ್ಯಮಗಳ ಹಾವಳಿ ಹೆಚ್ಚಿರುವ ಈ ದಿನಗಳಲ್ಲೂ ಸಹ ಮುದ್ರಣ ಮಾಧ್ಯಮ ತನ್ನದೇ ಛಾಪನ್ನು ಹೊಂದಿದೆ. ದೃಶ್ಯ ಮಾಧ್ಯಮಗಳು ಏನನ್ನೇ ಬಿತ್ತರಿಸಲಿ, ಅದನ್ನು ಖಚಿತಪಡಿಸಕೊಳ್ಳಲು ಜನರು ಇಂದಿಗೂ ಮುದ್ರಣ ಮಾಧ್ಯಮವನ್ನೇ ಅವಲಂಬಿಸಿದ್ದಾರೆಂದು ಬರಹಗಾರ ತುರುವೇಕೆರೆ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ದೃಶ್ಯ ಮಾಧ್ಯಮಗಳ ಹಾವಳಿ ಹೆಚ್ಚಿರುವ ಈ ದಿನಗಳಲ್ಲೂ ಸಹ ಮುದ್ರಣ ಮಾಧ್ಯಮ ತನ್ನದೇ ಛಾಪನ್ನು ಹೊಂದಿದೆ. ದೃಶ್ಯ ಮಾಧ್ಯಮಗಳು ಏನನ್ನೇ ಬಿತ್ತರಿಸಲಿ, ಅದನ್ನು ಖಚಿತಪಡಿಸಕೊಳ್ಳಲು ಜನರು ಇಂದಿಗೂ ಮುದ್ರಣ ಮಾಧ್ಯಮವನ್ನೇ ಅವಲಂಬಿಸಿದ್ದಾರೆಂದು ಬರಹಗಾರ ತುರುವೇಕೆರೆ ಪ್ರಸಾದ್ ಹೇಳಿದರು.

ಪಟ್ಟಣದ ರೋಟರಿ ಭವನದಲ್ಲಿ ರೋಟರಿಕ್ಲಬ್ ಮತ್ತು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ದಿವಂಗತ ಎ.ವಿ. ಶ್ರೀಧರಮೂರ್ತಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ದೃಶ್ಯ ಮಾಧ್ಯಮಗಳು ಕ್ಷಣ ಮಾತ್ರದಲ್ಲಿ ಸುದ್ದಿ ಬಿತ್ತಿರಿಸಿ ತಾನೇ ಮೊದಲಿಗ ಎಂಬ ಬೆನ್ನು ತಟ್ಟಿಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತವೆ. ಸುಳ್ಳು ಸುದ್ದಿಗಳು ಬಿತ್ತರವಾಗುವ ಸಾಧ್ಯತೆಯನ್ನೂ ತಳ್ಳುವಂತಿಲ್ಲ. ಅಂತೆಯೇ ತಾನು ಪ್ರಸಾರ ಮಾಡಿದ ಸುದ್ದಿಯನ್ನು ಸತ್ಯವೆಂದು ಬಿಂಬಿಸುವ ಪ್ರಯತ್ನವನ್ನು ಮಾಡುತ್ತದೆ. ಆದರೆ ಮುದ್ರಣ ಮಾಧ್ಯಮದಲ್ಲಿ ಬಹುಪಾಲು ಸುಳ್ಳು ಸುದ್ದಿಗಳಿಗೆ ಆಸ್ಪದವಿಲ್ಲ. ಅಳೆದೂ ತೂಗಿ ಪ್ರಕಟಿಸುತ್ತವೆ. ಹಾಗಾಗಿ ಇಂದಿಗೂ ಸಹ ಮುದ್ರಣ ಮಾಧ್ಯಮ ಜನರ ಜೀವನಾಡಿಯಾಗಿದೆ. ನಂಬಿಕೆಗೆ ಪಾತ್ರವಾದ ಮಾಧ್ಯಮವಾಗಿದೆ ಎಂದು ತುರುವೇಕೆರೆ ಪ್ರಸಾದ್ ಹೇಳಿದರು. ಪತ್ರಕರ್ತರು ಹಲವು ವೃತ್ತಿಗಳಲ್ಲಿರುವಂತೆ ಏಕ ವಿಷಯ ಪರಿಣಿತರಲ್ಲ, ಅವರು ಕಲೆ, ವಿಜ್ಞಾನ, ವಾಣಿಜ್ಯ. ಕಾನೂನು ಸೇರಿದಂತೆ ಹಲವು ವಿಷಯಗಳಲ್ಲಿ ಏಕಕಾಲದಲ್ಲಿ ಪರಿಣಿತಿ ಹೊಂದಿರಬೇಕು. ಮಾನವೀಯ ವರದಿಗಳು ಜನರ ನೋವು ಸಂಕಟಗಳ ಪ್ರತಿಬಿಂಬವಾದರೆ, ತನಿಖಾ ವರದಿಗಳು ವ್ಯವಸ್ಥೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ. ಹಾಗಾಗಿ ಪತ್ರಕರ್ತರು ಮಾನವೀಯ ಮತ್ತು ತನಿಖಾ ವರದಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಪತ್ರಕರ್ತ ಎಂ.ಬಿ.ಬೈರೇಶ್ ಮಾತನಾಡಿ ಇಂದಿನ ದಿನಗಳಲ್ಲಿ ನಾಗರಿಕ ಪತ್ರಿಕೋದ್ಯಮ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ನಾಗರಿಕರೇ ಸುದ್ದಿಗಳನ್ನು ಹಂಚಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸುದ್ದಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಆದಾಗ್ಯೂ ಮುದ್ರಣ ಮಾಧ್ಯಮವನ್ನೇ ವಿಶ್ವಾಸಾರ್ಹ ಎಂದು ಜನ ಇನ್ನೂ ಪರಿಗಣಿಸಿದ್ದಾರೆಂದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಎಸ್.ನಾಗಭೂಷಣ್ ಹಾಗೂ ಪತ್ರಕರ್ತ ಎಂ.ಬಿ.ಭೈರೇಶ್ ಅವರಿಗೆ ದಿ.ಎ.ವಿ.ಶ್ರೀಧರಮೂರ್ತಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಗಭೂಷಣ್ ಹಾಗೂ ಹಿರಿಯ ಪತ್ರಕರ್ತ ಆರ್.ಸತ್ಯನಾರಾಯಣ್ ಎ.ವಿ.ಶ್ರೀಧರಮೂರ್ತಿ ಅವರೊಂದಿಗಿನ ತಮ್ಮ ವೃತ್ತಿಜೀವನದ ಘಟನೆಗಳನ್ನು ಮೆಲುಕು ಹಾಕಿದರು. ಕಾರ್ಯನಿರತ ಸಂಘದ ಅಧ್ಯಕ್ಷ ದುಂಡ ಮಲ್ಲಿಕಾರ್ಜುನ್ ಮಾತನಾಡಿದರು. ಎವಿಎಸ್ ನೆನಪಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಧನ ಸಹಾಯ ನೀಡಲಾಯಿತು.

ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಾದ ಎಂ.ಬಿ.ಧರಣೀಶ್, ಸಚಿನ್, ಮನೋಹರ್, ರಂಗಸ್ವಾಮಿ, ದೇವರಾಜ್, ಸುರೇಶ್ ಬಾಬುರವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ರೋಟರಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಪ್ರಕಾಶಗುಪ್ತಾ, ಅಧ್ಯಕ್ಷ ವಿ.ಆರ್.ಉಮೇಶ್, ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಸುನಿಲ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್ ಕಾರ್ಯಕ್ರಮ ನಿರೂಪಿಸಿದರು