ಅಪಪ್ರಚಾರದ ನಡುವೆಯೂ ದೇಶದ ಸುಭದ್ರತೆಗಾಗಿ ಜನ ಮತ ಹಾಕಿದ್ದಾರೆ-ಸಂಸದ ಬೊಮ್ಮಾಯಿ

| Published : Jun 22 2024, 12:46 AM IST

ಅಪಪ್ರಚಾರದ ನಡುವೆಯೂ ದೇಶದ ಸುಭದ್ರತೆಗಾಗಿ ಜನ ಮತ ಹಾಕಿದ್ದಾರೆ-ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದ ಖಜಾನೆಯ ದುರುಪಯೋಗ, ಅಧಿಕಾರದ ದುರುಪಯೋಗ, ಅಪಪ್ರಚಾರದ ನಡುವೆಯೂ ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಕಾಂಗ್ರೆಸ್ ಸರ್ಕಾರದ ಖಜಾನೆಯ ದುರುಪಯೋಗ, ಅಧಿಕಾರದ ದುರುಪಯೋಗ, ಅಪಪ್ರಚಾರದ ನಡುವೆಯೂ ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಿಜೆಪಿ ಹಾವೇರಿ ವಿಧಾನಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ, ಮತದಾರರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ಕಾರ್ಯಕ್ರಮದ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಈ ಸನ್ಮಾನ, ಅಭಿನಂದನೆ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಸೇರಬೇಕು. ಕಾಂಗ್ರೆಸ್ ಸರ್ಕಾರ ನಮ್ಮ ಹಣವನ್ನೇ ನಮಗೆ ಕೊಡುತ್ತಿದೆ ಎಂಬ ಅರಿವು ಜನರಿಗೆ ಗೊತ್ತಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಜನರು ಕೊಂಡುಕೊಳ್ಳುವ ಎಲ್ಲಾ ಧಾರಣೆಗಳ ಬೆಲೆ ಗಗನಕ್ಕೇರಿದೆ. ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ರೈತರನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ. ಬರಗಾಲ ಬಂದರೂ ಪರಿಹಾರ ಕೊಟ್ಟಿಲ್ಲ, ಕೇಂದ್ರ ಕೊಟ್ಟಿದ್ದನ್ನೂ ಇನ್ನೂ ಸರಿಯಾಗಿ ಕೊಟ್ಟಿಲ್ಲ, ನಮ್ಮ ಸರ್ಕಾರ ಇದ್ದಾಗ ಕೇಂದ್ರ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವು. ಸರ್ಕಾರದ ಆಸ್ತಿ ಮಾರಾಟಕ್ಕೆ ಇಟ್ಟಿದ್ದಾರೆ. ಕರ್ನಾಟಕವನ್ನು ದಿವಾಳಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.ಈ ಚುನಾವಣೆ ಬಹಳ ವಿಭಿನ್ನವಾಗಿತ್ತು. ಮತದಾರರ ಪ್ರಬುದ್ಧತೆ ಪ್ರಶ್ನಿಸುವ ಚುನಾವಣೆ ಆಗಿತ್ತು. ಈ ಚುನಾವಣೆಯಲ್ಲಿ ಯಾರು ಗೆದ್ದಿದ್ದಾರೆ, ಯಾರು ಸೋತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರೆ ಮತದಾರರು ಗೆದ್ದಿದ್ದಾರೆ. ಕಾಂಗ್ರೆಸ್ ಬಹಳ ಹತಾಶೆ ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಸಹ ಲೋಕಸಭೆ ಗೆಲ್ಲುವ ವಿಶ್ವಾಸ ಇರಲಿಲ್ಲ, ಹೀಗಾಗಿ ಸಾಕಷ್ಟು ತಂತ್ರಗಾರಿಕೆ ಮಾಡಿದರು. ಜನರ ತೆರಿಗೆ ಹಣವನ್ನು ಬಹಿರಂಗವಾಗಿ ದುರುಪಯೋಗ ಮಾಡಿಕೊಂಡಿತು. ಚುನಾವಣಾ ಆಯೋಗ ಗಮನಿಸಬೇಕಿತ್ತು. ಆದರೆ, ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮತದಾನ ಎರಡು ದಿನ ಮುಂಚೆ ೨ ತಿಂಗಳ ಗ್ಯಾರಂಟಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಿದರು. ಒಂದು ತಿಂಗಳು ಅಡ್ವಾನ್ಸ್ ಹಣ ಕೊಟ್ಟರು. ಮತದಾನದ ಎರಡು ದಿನ ಮೊದಲು ಹಣ ಹಾಕುವುದು ಸಣ್ಣ ಮಾತಲ್ಲ, ಜನರ ದುಡ್ಡನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೆ ಯಾವುದೇ ಸರ್ಕಾರ ಹೀಗೆ ಮಾಡಿರಲಿಲ್ಲ, ಆದರೂ ಜನ ಅವರಿಗೆ ಮತ ಕೊಡಲಿಲ್ಲ ಎಂದರು. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ೨೫ ಕೋಟಿ ರು. ಕೊಡುತ್ತೇವೆ ಅಂತ ಹೇಳಿದ್ದರು. ನಯಾಪೈಸೆ ಕೊಟ್ಟಿಲ್ಲ, ಜನರು ಬೆವರು ಸುರಿಸಿ ದುಡಿದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಖರ್ಚು ಮಾಡಬೇಕು. ಇದಕ್ಕಾಗಿ ಹೋರಾಟ ಮಾಡೋಣ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಈ ಲೋಕಸಭಾ ಚುನಾವಣೆ ಹಿಂದಿನ ಲೋಕಸಭಾ ಚುನಾವಣೆಗಿಂತಲೂ ಭಿನ್ನವಾಗಿತ್ತು. ಬೊಮ್ಮಾಯಿ ಅವರು ಮೆಡಿಕಲ್ ಕಾಲೇಜ್ ಆರಂಭಿಸಿದ್ದಾರೆ. ಇಲ್ಲಿನ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಹಾವೇರಿ ಕ್ಷೇತ್ರದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇಡೀ ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ. ಬೊಮ್ಮಾಯಿ ಅವರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತಾರೆ ಎಂದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಗ್ರಾಮೀಣ ಮಂಡಳದ ಅಧ್ಯಕ್ಷ ಬಸವರಾಜ ಕಳಸೂರ, ನಗರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ಮುಖಂಡರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಬಸವರಾಜ ಅರಬಗೊಂಡ, ನಾಗೇಂದ್ರ ಕಟಕೋಳ, ಡಿ.ಎಸ್.ಮಾಳಗಿ, ಪರಮೇಶಪ್ಪ ಮೇಗಳಮನಿ, ಸುರೇಶ ಹೊಸಮನಿ ಇತರರು ಇದ್ದರು. ಜನರ ಸಲಹೆ, ಸೂಚನೆ ಪಡೆದು ಅಭಿವೃದ್ಧಿ: ಹಾವೇರಿಯಲ್ಲಿ ಹಾಲು ಒಕ್ಕೂಟ ಮಾಡಿದ್ದೇವೆ. ಡಿಸಿಸಿ ಬ್ಯಾಂಕ್ ಆರಂಭಿಸುವುದಕ್ಕೆ ನಬಾರ್ಡ್, ರಿಸರ್ವ್ ಬ್ಯಾಂಕ್ ಸಹಕಾರ ಕೊಡಲಿಲ್ಲ, ಆದರೆ, ಹೋರಾಟ ನಿಂತಿಲ್ಲ, ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಎಲ್ಲಾ ವರ್ಗದ ಜನರಿಗೆ ಉದ್ಯೋಗ ನೀಡುವ ಮೂಲಕ ದೊಡ್ಡ ಪರಿವರ್ತನೆ ಮಾಡಲಾಗುವುದು. ಲೋಕಸಭಾ ಕ್ಷೇತ್ರಕ್ಕೆ ವಿಜನ್ ಡಾಕ್ಯುಮೆಂಟ್ ಮಾಡಿ ಜನರ ಸಲಹೆ, ಸೂಚನೆಗಳನ್ನು ಪಡೆದು ಕೆಲಸ ಮಾಡುತ್ತೇನೆ. ಮುಂಬರುವ ತಾಪಂ, ಜಿಪಂ ಚುನಾವಣೆಯನ್ನೂ ನನ್ನ ಚುನಾವಣೆಗಿಂತಲೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಕಚೇರಿ ಆರಂಭಿಸಿ ಎಲ್ಲೆಲ್ಲಿ ಯಾವಾಗ ಸಿಗುತ್ತೇನೆ ಎಂಬುದರ ಕುರಿತು ಮಾಹಿತಿ ಕೊಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.