ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ಮರಳಿಗೆ ಭಾರಿ ಪ್ರಮಾಣದ ಬೇಡಿಕೆ ಇದೆ. ಬಡವರಿಗೂ ಕಡಿಮೆ ದರದಲ್ಲಿ ಮರಳು ನೀಡಲು ಸರ್ಕಾರ, ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೋರೇಷನ್ ಲಿ. (ಕೆಎಸ್‌ಎಂಸಿಎಲ್) ಗೆ 6 ಮರಳಿನ ಬ್ಲಾಕ್‌ಗಳನ್ನು ನೀಡಿತ್ತು. ಆದರೆ ಪರಿಸರ ಇಲಾಖೆಯ ವಿಮೋಚನಾ ಪತ್ರ ಸಿಗದ ಕಾರಣ, ಈ ಬ್ಲಾಕ್‌ಗಳ ಮರಳು ಲೂಟಿಕೋರರ ಪಾಲಾಗಿ, ಸರ್ಕಾರಕ್ಕೆ ಲಕ್ಷಾಂತರ ರು. ರಾಜಸ್ವಧನ ನಷ್ಟವಾಗಿದೆ.ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ನದಿಯಲ್ಲಿನ ಮರಳಿನ ನಿಕ್ಷೇಪಗಳನ್ನು ಗುರುತಿಸಿ, ಜಂಟಿ ಸರ್ವೆ ಮುಗಿಸಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ನವಲಿ-2, ಸೋವೇನಹಳ್ಳಿ-1, ಹರವಿ-1, ಹರಪನಹಳ್ಳಿ ತಾಲೂಕಿನ ತಾವರೆಗುಂದಿ-2 ಸೇರಿದಂತೆ ಒಟ್ಟು 6 ಮರಳಿನ ಬ್ಲಾಕ್‌ಗಳನ್ನು ಟಾಸ್ಕ್‌ಪೋರ್ಸ್ ಸಮಿತಿಯಿಂದ ಕೆಎಸ್‌ಎಂಸಿಎಲ್‌ಗೆ ನೀಡಲಾಗಿತ್ತು.
ಕೆಎಸ್‌ಎಂಸಿಎಲ್‌ಗೆ ನೀಡಿದ್ದ ಮರಳಿನ ಬ್ಲಾಕ್‌ಗಳಲ್ಲಿನ ಮರಳನ್ನು ಸಂಗ್ರಹಿಸಿ, ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಪರಿಸರ ಇಲಾಖೆಯಿಂದ ಪರಿಸರ ವಿಮೋಚನಾ ಪತ್ರ ಪಡೆಯಬೇಕಿತ್ತು. ಈ ಕುರಿತು 3 ವರ್ಷ ಕಳೆದರೂ ಪತ್ರ ಮಾತ್ರ ಸಿಗಲಿಲ್ಲ, ಅತ್ತ ಜನರಿಗೂ ಬೊಗಸೆ ಮರಳು ಮಾರಾಟ ಮಾಡಿಲ್ಲ. ಈ ಕುರಿತು ಕೆಎಸ್‌ಎಂಸಿಎಲ್ ಅಷ್ಟೇನೂ ಆಸಕ್ತಿ ತೋರಲಿಲ್ಲ.ಈಚಿಗೆ ಜರುಗಿದ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ, ಕೆಎಸ್‌ಎಂಸಿಎಲ್‌ಗೆ ನೀಡಿದ್ದ 6 ಮರಳಿನ ಬ್ಲಾಕ್‌ಗಳನ್ನು ಟಾಸ್ಕ್‌ಪೋರ್ಸ್ ಸಮಿತಿ ಮರಳಿ ಪಡೆದು, ನದಿ ತೀರದ ಎಲ್ಲ ಮರಳಿನ ಬ್ಲಾಕ್‌ಗಳನ್ನು ಟೆಂಡರ್ ಮಾಡಲು ಚಿಂತನೆ ನಡೆಸಲಾಗಿದೆ.
ತಾಲೂಕಿನಲ್ಲಿ ಹರವಿ, ಹಿರೇಬನ್ನಿಮಟ್ಟಿ, ಕೊಂಬಳಿ, ಹಕ್ಕಂಡಿ, ಕಂದಗಲ್ಲು ಪುರ ಸೇರಿದಂತೆ ಇತರ ಕಡೆಗಳಲ್ಲಿ, ನೂರಾರು ಎಕರೆ ಪ್ರದೇಶದಲ್ಲಿರುವ ಮರಳಿನ ನಿಕ್ಷೇಪಗಳನ್ನು ಗುರುತಿಸಲಾಗಿದೆ. ವಾರದೊಳಗೆ ಮರಳಿನ ಟೆಂಡರ್ ಕುರಿತು ಅಧಿಸೂಚನೆ ಹೊರ ಬೀಳಲಿದೆ.ಮರಳಿನ ಸ್ಟಾಕ್‌ಯಾರ್ಡ್‌ಗಳಲ್ಲಿ 2022ರ ಮೇ ತಿಂಗಳಿಂದ ಈ ವರೆಗೂ ಅಂದರೆ 2 ವರ್ಷಗಳ ಕಾಲ ಜನರಿಗೆ ಹಾಗೂ ಗುತ್ತಿಗೆದಾರರಿಗೆ ಮರಳು ಸಿಕ್ಕಿಲ್ಲ. ಇದರ ಪರಿಣಾಮ ಅಕ್ರಮ ಮರಳು ದಂಧೆಕೋರರು ದುಪ್ಪಟ್ಟು, ಬೆಲೆಗೆ ಮರಳು ಮಾರಾಟ ಮಾಡಿದ್ದರೂ ಯಾರು ಕೇಳುವವರು ಇಲ್ಲದಂತಾಗಿತ್ತು.
ನದಿ ತೀರದ ಮದಲಗಟ್ಟಿ, ಕೊಂಬಳಿ ಮತ್ತು ಕಂದಗಲ್ಲು ಪುರ ಬಳಿ 20 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ 6 ಮರಳಿನ ಬ್ಲಾಕ್‌ಗಳನ್ನು ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ ಮತ್ತು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸರ್ವೇ ನಡೆಸಿ ಗುರುತಿಸಿದೆ.ಈಗಾಗಲೇ ತುಂಗಭದ್ರಾ ನದಿ ತೀರದ ಎಲ್ಲ ಕಡೆಗೂ ಮರಳಿನ ಬ್ಲಾಕ್‌ಗಳನ್ನು ಗುರುತಿಸಲಾಗಿದೆ, ವಾರದೊಳಗೆ ಈ ಕುರಿತು ಅಧಿಸೂಚನೆ ಹೊರಡಿಸಲಾಗುತ್ತಿದೆ. ಕೆಎಸ್‌ಎಂಸಿಎಲ್‌ಗೆ ನೀಡಿದ್ದ 6 ಮರಳಿನ ಬ್ಲಾಕ್‌ಗಳೂ ಟೆಂಡರ್ ಆಗುತ್ತದೆ ಎಂದು ಹೊಸಪೇಟೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ಕೀರ್ತಿ ಕುಮಾರ್ ಹೇಳಿದರು.
ಕಳೆದ 2022ರಿಂದ ಜನರಿಗೆ ಸರ್ಕಾರ ಮರಳು ನೀಡಿಲ್ಲ, ನದಿಯಲ್ಲಿದ್ದ ಮರಳು ಅಕ್ರಮ ದಂಧೆಕೋರರು ಲೂಟಿ ಮಾಡಿದ್ದಾರೆ. ಬಡ ಜನರಿಗೆ ದುಪ್ಪಟ್ಟು ಬೆಲೆಗೆ ಮರಳು ಮಾರಾಟ ಮಾಡಿದ್ದರೂ ಯಾರು ಕೇಳಿಲ್ಲ. ಸರ್ಕಾರ ಶೀಘ್ರದಲ್ಲೇ ಟೆಂಡರ್ ಮಾಡಿದರೆ ಜನರಿಗೆ ಸಕಾಲದಲ್ಲಿ ಮರಳು ಸಿಗುತ್ತದೆ ಎಂದು ಹ್ಯಾರಡ ಗ್ರಾಮದ ಹೋರಾಟಗಾರ ಶಾಂತರಾಜ ಜೈನ್ ಹೇಳಿದರು.