ಮನೆಗೇ ರಾಮ ಬಂದಿದ್ದಾನೆಂಬ ಸಂಭ್ರಮದಲ್ಲಿ ಜನತೆ: ಕೇಂದ್ರ ಸಚಿವ ಜೋಶಿ

| Published : Jan 23 2024, 01:47 AM IST

ಸಾರಾಂಶ

ರಾಮ ಒಳ್ಳೆಯ ಭಕ್ತನಿಗಾಗಿಯೇ ಕಾಯುತ್ತಿದ್ದ. ನರೇಂದ್ರ ಮೋದಿ ಅವರಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆಯೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ನಮ್ಮ ಮನೆಗೇ ರಾಮ ಬಂದಿದ್ದಾನೆ ಎನ್ನುವ ರೀತಿಯಲ್ಲಿ ದೇಶದ ಜನತೆ ಖುಷಿಪಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ವೀರಾಪುರ ಓಣಿಯ ಗೊಲ್ಲರ ಕಾಲನಿಯಲ್ಲಿ ಬೃಹತ್ ಎಲ್ಇಡಿ ಮೂಲಕ ಅಯೋಧ್ಯೆಯಲ್ಲಿನ ಕಾರ್ಯಕ್ರಮದ ನೇರ ವೀಕ್ಷಣೆ ಮಾಡಿದ ಅವರು, ಶ್ರೀರಾಮನ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು. ಅತ್ಯಂತ ಸರಳವಾಗಿ ಸುಸೂತ್ರವಾಗಿ ರಾಮನ ಪ್ರತಿಷ್ಠಾಪನೆಯಾಗಿದೆ. ರಾಮನೂ ಒಳ್ಳೆಯ ಭಕ್ತನಿಗಾಗಿಯೇ ಕಾಯುತ್ತಿದ್ದ. ನರೇಂದ್ರ ಮೋದಿ ಅವರಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆಯೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದರು.

ರಾಮೋತ್ಸವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಜೆ ನೀಡದಿರುವುದಕ್ಕೆ ಕಿಡಿಕಾರಿದ ಜೋಶಿ, ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಅಯೋಧ್ಯೆಗೆ ಹೋಗುವುದರ ಬಗ್ಗೆಯೇ ಅವರಲ್ಲಿ ಗೊಂದಲ ಇದೆ. ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಬರೀ ಗೊಂದಲದಲ್ಲೇ ಇದೆ.

ರಾಮೋತ್ಸವಕ್ಕೆ ಸಂಬಂಧಪಟ್ಟಂತೆ ಮೊದಲು ಆಹ್ವಾನ ಪತ್ರಿಕೆ ಬಂದಿಲ್ಲ ಅಂದಿದ್ದರು. ಆಹ್ವಾನ ಕೊಟ್ಟ ಮೇಲೆ ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬರುವುದಿಲ್ಲ ಎಂದು ನುಡಿದರು.

ಈಗ ಕರ್ನಾಟಕದಲ್ಲಿ ರಜೆ ಕೊಡುವ ವಿಚಾರದಲ್ಲಿ ಗೊಂದಲಕ್ಕೊಳಗಾದರು. ಬಹುಶಃ ರಾಹುಲ್‌ಗಾಂಧಿ ಅವರನ್ನು ಸಿದ್ದರಾಮಯ್ಯ ಕೇಳಿರಬೇಕು. ಅವರ ರಜೆ ಕೊಡಬೇಡಿ ಎಂದು ಹೇಳಿರಬೇಕು. ಅದಕ್ಕಾಗಿ ಸಿದ್ದರಾಮಯ್ಯ ರಜೆ ಕೊಟ್ಟಿಲ್ಲ ಎಂದರು.

ಸಿದ್ದರಾಮಯ್ಯ ಮೊದಲನಿಂದಲೂ ಹಿಂದೂ ವಿರೋಧಿಯೇ ಇದ್ದಾರೆ. ಇದೀಗ ಮತಕ್ಕಾಗಿ ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನೇರ ವೀಕ್ಷಣೆ ಮಾಡಿದ ನಂತರ ಮಕ್ಕಳಿಗೆ ಕೇಸರಿ ತಿಲಕ ಇಟ್ಟು ಜೋಶಿ ಸಂಭ್ರಮಿಸಿದರು. ರಾಮನಿಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಮುಗಿಯುವರೆಗೂ ಅಲ್ಲೇ ನಿವಾಸಿಗಳೊಂದಿಗೆ ಕುಳಿತು ವೀಕ್ಷಿಸಿದರು.

ಈ ವೇಳೆ ಮಹೇಂದ್ರ ಕೌತಾಳ, ಪ್ರಭುನವಲಗುಂದಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.