ಸಾರಾಂಶ
ಕನ್ನಡಪ್ರಭವಾರ್ತೆ ಹನೂರು
ಏ.26ರಂದು ನಡೆದ ಲೋಕಸಭಾ ಚುನಾವಣೆ ವೇಳೆ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಆದಂತಹ ಗಲಭೆ ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಆರ್. ನರೇಂದ್ರ ವಿಷಾದ ವ್ಯಕ್ತಪಡಿಸಿದರು.ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ಜಿದ್ದಾಜಿದ್ದಿನಿಂದ ಚುನಾವಣೆ ನಡೆಯುತ್ತಾ ಬಂದಿದೆ. ಆದರೆ ಯಾರೊಬ್ಬರೂ ಮತಗಟ್ಟೆ, ಮತಯಂತ್ರಗಳನ್ನು ಒಡೆದು ಹಾಕಿರಲಿಲ್ಲ. ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಇದುವರೆಗೂ ನಡೆದಿರಲಿಲ್ಲ. ಯಾರದೋ ಕುಮ್ಮಕ್ಕಿನಿಂದ ಇಂತಹ ಕೃತ್ಯ ನಡೆದಿದೆ. ಕಾಡಂಚಿನ ಗ್ರಾಮಗಳಾದ ತುಳಸಿಕೆರೆ, ಮೆಂದಾರೆ, ಮೆದಗನಾಣೆ, ಇಂಡಿಗನತ್ತ, ಪಡಸಲನಾಥ ಗ್ರಾಮದ ಜನರು ಮುಗ್ಧರಾಗಿದ್ದಾರೆ. ಇವರಿಗೆ ಕಾನೂನಿನ ಅರಿವಿಲ್ಲ, ತೊಂದರೆ ಕೊಟ್ಟರೆ ಏನಾಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲ. ಕೆಲವರು ಇವರನ್ನು ಎತ್ತಿಕಟ್ಟಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ಏ.29ರಂದು ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆಯುತ್ತಿದೆ. ಅಧಿಕಾರಿಗಳು ಚುನಾವಣಾ ಆಯೋಗದಂತೆ ತೀರ್ಮಾನ ಕೈಗೊಂಡಿದ್ದಾರೆ. ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ 550ಕ್ಕೂ ಹೆಚ್ಚು ಮತಗಳಿದ್ದು ಇಂಡಿಗನತ್ತ ಗ್ರಾಮದವರ ಮೇಲೆ ಪ್ರಕರಣ ದಾಖಲಾಗಿರುವುದರಿಂದ ಮತದಾನದ ಪ್ರಮಾಣ ಕಡಿಮೆಯಾಗಬಹುದು. ಜೊತೆಗೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವವರು ಕೆಲವರು ಕುತಂತ್ರ ನಡೆಸಿದ್ದಾರೆ.ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ ನಡೆಸಿಕೊಂಡು ಇವರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ರಸ್ತೆ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ನಾಗಮಲೆಗೆ ಹೋಗುವ ಪಾದಯಾತ್ರಿಕರನ್ನು ಬಿಡದೆ ಇರುವುದರಿಂದ ಹಾಗೂ ಜೀಪ್‌ಗಳನ್ನು ಬಿಡದೆ ಇರುವುದರಿಂದ ಈ ಗ್ರಾಮದ ಜನರಿಗೆ ಜೀವನ ನಿರ್ವಹಣೆಗೂ ತೊಂದರೆಯಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ವಿರೋಧ ಪಕ್ಷದವರು ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರಲು ರಾಜಕೀಯ ದಾಳವನ್ನು ಉರುಳಿಸಲು ಚಾಲಕರು ಹಾಗೂ ವ್ಯಾಪಾರಸ್ಥರನ್ನು ಎತ್ತಿ ಕಟ್ಟಿ ಈ ರೀತಿ ಮಾಡುತ್ತಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ಇಂತಹ ಆಚಾತುರ್ಯ ಘಟನೆ ನಡೆದಿರುವುದು ಕ್ಷೇತ್ರಕ್ಕೆ ಕಳಂಕ ತಂದಿದೆ. ಯಾರೋ ಮಾಡಿದ ತಪ್ಪಿಗೆ ಮುಗ್ಧ ಗ್ರಾಮಸ್ಥರು ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ. ಮುಗ್ಧ ಜನರನ್ನು ಇಟ್ಟುಕೊಂಡು ರಾಜಕೀಯ ಮಾಡಿರುವುದು ಸರಿ ಇಲ್ಲ ಎಂದು ಪಕ್ಷದ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡರು.ಗ್ರಾಮದಲ್ಲಿ ಗಲಾಟೆ ಮಾಡಿರುವ ಅಪರಾಧಿಗಳಿಗೆ ಕಾನೂನಿನಡಿ ಶಿಕ್ಷೆಯಾಗಲಿ, ಆದರೆ ತಪ್ಪೇ ಮಾಡದ ಹಲವಾರು ಮುಗ್ಧ ನಿರಪರಾಧಿಗಳ ಹೆಸರನ್ನು ಸೇರಿಸಿರುವುದು ಗಮನಕ್ಕೆ ಬಂದಿದೆ. ನಿರಪರಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುತ್ತೇನೆ ಎಂದರು. ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಹಾಜರಿದ್ದರು.