ಸಾರಾಂಶ
ಚೌಡೇಶ್ವರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಫಲವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದು, ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಪಾತ್ರ ಏನಿತ್ತು, ಅದರ ಶ್ರಮ ಎಷ್ಟೆಂದು ದೇಶವಾಸಿಗಳಿಗೆ ಗೊತ್ತಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿಪಕ್ಷ ಕಾಂಗ್ರೆಸ್ ಮುಖಂಡರ ಟೀಕೆಗಳಿಗೆ ತಿರುಗೇಟು ನೀಡಿದರು.
ಇಲ್ಲಿನ ವಿನೋಬ ನಗರದ 1ನೇ ಮುಖ್ಯರಸ್ತೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಜ.14ರಿಂದ 22ರವರೆಗೆ ಧಾರ್ಮಿಕ ಕೇಂದ್ರಗಳ ಬಳಿ ಸ್ವಚ್ಛತಾ ಆಂದೋಲನದ ಭಾಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿ ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದು, ಯಾರು ಹೋರಾಟ ಮಾಡಿದ್ದಾರೋ ಅಂತಹವರಿಗೆ ಫಲ ಸಿಕ್ಕೇ ಸಿಗುತ್ತದೆ ಎಂದರು.ರಾಮ ಮಂದಿರ ನಿರ್ಮಾಣ ಯಾರು ವಿರೋಧಿಸಿದ್ದರೋ, ಯಾರು ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದ್ದರೋ, ಯಾರು ಶ್ರೀರಾಮ ಕೇವಲ ಕಾಲ್ಪನಿಕ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದರೋ ಅಂತಹವರಿಗೂ ಫಲ ಸಿಕ್ಕೇ ಸಿಗುತ್ತದೆ. ಆದರೆ, ಆ ಫಲ ಯಾವ ರೀತಿಯದ್ದು ಎಂಬುದನ್ನು ಕಾಲ ನಿರ್ದರಿಸಲಿದೆ. ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಅಖಂಡ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಜ.22ರಂದು ದೇಶ, ವಿದೇಶಗಳಲ್ಲಿ ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ಸಮಾರಂಭ ಹಬ್ಬದಂತೆ ಆಚರಿಸಲು ಸಿದ್ಧತೆ ನಡೆದಿದೆ. ಭಾರತದಲ್ಲೂ ಸಂಭ್ರಮದಿಂದ ಶ್ರೀರಾಮಚಂದ್ರನ ಮಂದಿರ ಉದ್ಘಾಟನೆಯ ತುದಿಗಾಲಲ್ಲಿ ಭಕ್ತರು ಕಾಯುತ್ತಿದ್ದಾರೆ. ದಾವಣಗೆರೆಯೂ ರಾಮೋತ್ಸವಕ್ಕೆ ತೆರೆದುಕೊಂಡಿದೆ. ಈ ಒಂದು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಒಂದು ಭಾಗವಾಗುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವಿರೇಶ ಹನಗವಾಡಿ, ಮುಖಂಡರಾದ ಯಶವಂತರಾವ್ ಜಾಧವ್, ಬಿ.ಎಸ್.ಜಗದೀಶ, ರಾಜನಹಳ್ಳಿ ಶಿವಕುಮಾರ, ಕೆ.ಪ್ರಸನ್ನಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ಆರ್.ಎಲ್.ಶಿವಪ್ರಕಾಶ, ಪುಷ್ಪಾ ವಾಲಿ, ಗೌರಮ್ಮ ಪಾಟೀಲ್, ಸಚಿನ್ ವರ್ಣೇಕರ್, ವಕೀಲರಾದ ಎಚ್.ದಿವಾಕರ, ರಾಘವೇಂದ್ರ ಮೊಹರೆ, ವಿನಯ್, ಕರಾಟೆ ತಿಮ್ಮೇಶ್, ಪುನೀತ, ಪ್ರವೀಣ, ಯಲ್ಲೇಶ, ಯುವ ಮೋರ್ಚಾ ಶ್ರೀಧರ್. ಸೇರಿ ಇತರರಿದ್ದರು.