ಎಟಿಎಂ ಸರ್ಕಾರ ಯಾವುದು ಎಂಬುದು ಜನರಿಗೆ ಗೊತ್ತು: ಭೀಮಾನಾಯ್ಕ

| Published : Oct 16 2023, 01:45 AM IST

ಎಟಿಎಂ ಸರ್ಕಾರ ಯಾವುದು ಎಂಬುದು ಜನರಿಗೆ ಗೊತ್ತು: ಭೀಮಾನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

೪೦ ಪರ್ಸೆಂಟ್ ಕಮಿಷನ್, ಹಗರಣಗಳಿಗೆ ಬೇಸತ್ತ ರಾಜ್ಯದ ಜನತೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಎಟಿಎಂ ಸರ್ಕಾರ ಯಾವುದು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಲೇವಡಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

೪೦ ಪರ್ಸೆಂಟ್ ಕಮಿಷನ್, ಹಗರಣಗಳಿಗೆ ಬೇಸತ್ತ ರಾಜ್ಯದ ಜನತೆ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಎಟಿಎಂ ಸರ್ಕಾರ ಯಾವುದು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿದ್ದ ಶೇ. ೪೦ ಕಮಿಷನ್ ಆರೋಪದ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ. ಜನರು ಕಾಂಗ್ರೆಸ್‌ನ 135 ಶಾಸಕರನ್ನು ಆಯ್ಕೆ ಮಾಡಿ, ಬಿಜೆಪಿಯನ್ನು ಐದು ವರ್ಷಗಳ ಕಾಲ ಮನೆಗೆ ಕಳುಹಿಸಿದ್ದಾರೆ ಎಂದರು.

ರಾಜ್ಯದ ಇತಿಹಾಸದಲ್ಲಿ ಬಿಜೆಪಿಗೆ ಎಂದೂ ಜನಾಶೀರ್ವಾದ ಮಾಡಿಲ್ಲ. ೨೦೦6ರಲ್ಲಿ ಜೆಡಿಎಸ್ ಬೆಂಬಲದೊಂದಿಗೆ ೨೦- ೨೦ ಸರ್ಕಾರ, ೨೦೦೮ರಲ್ಲಿ ಪಕ್ಷೇತರರ ಬೆಂಬಲ, ೨೦೧೮ರಲ್ಲಿ ಜೆಡಿಎಸ್, ಕಾಂಗ್ರೆಸ್‌ ಶಾಸಕರ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ಬಿಜೆಪಿಯನ್ನು ಈ ಬಾರಿ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸದ್ಯ ಬಿಜೆಪಿ ನಾಯಕರಿಗೆ ಮಾಡಲು ಕೆಲಸವೇ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು.

ಪಂಚರಾಜ್ಯ ಚುನಾವಣೆಗೆ ಕಾಂಗ್ರೆಸ್ ಫಂಡಿಂಗ್ ಸಂಗ್ರಹಿಸುತ್ತಿದೆ ಎಂಬ ಆರೋಪ ನಿರಾಧಾರವಾಗಿದೆ. ಇತ್ತೀಚೆಗೆ ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ವಿಪಕ್ಷಗಳ ಆರೋಪ ನಿರಾಧಾರವಾಗಿದೆ. ೨೦೨೩ರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪದ ಹೊರತಾಗಿ ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮುಂದಿನ ೬ ತಿಂಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಬುಟ್ಟಿಯಲ್ಲಿ ಬಟ್ಟೆ ಹಾವಿದೆ. ಅವರಿಗೆ ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎಂಬುದು ಗೊತ್ತಿದೆ ಎಂದಷ್ಟೇ ಹೇಳಿದರು.