ಭಾರತ್ ಅಕ್ಕಿ ಖರೀದಿಗೆ ಕುಮಟಾದಲ್ಲಿ ಸಾಲುಗಟ್ಟಿದ ಜನತೆ

| Published : Feb 11 2024, 01:50 AM IST / Updated: Feb 11 2024, 04:06 PM IST

ಭಾರತ್ ಅಕ್ಕಿ ಖರೀದಿಗೆ ಕುಮಟಾದಲ್ಲಿ ಸಾಲುಗಟ್ಟಿದ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್ ಬ್ರಾಂಡ್ ಅಕ್ಕಿ ಖರೀದಿಸಲು ಸಾರ್ವಜನಿಕರು ಮುಗಿಬಿದ್ದರು. ಇದರಿಂದ ಉದ್ದದ ಸರತಿಯಲ್ಲಿ ಸಾಲುಗಟ್ಟಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಕುಮಟಾ:ಇಲ್ಲಿನ ಮಣಕಿ ಮಹಾತ್ಮ ಗಾಂಧಿ ಮೈದಾನ ಬಳಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳದಿಂದ (ನಾಫೆಡ್) ಸಂಚಾರಿ ವಾಹನಗಳ ಮೂಲಕ ಶನಿವಾರ ಮಾರಾಟಕ್ಕೆ ಆಗಮಿಸಿದ ’ಭಾರತ್ ಬ್ರಾಂಡ್’ ಅಕ್ಕಿ ಖರೀದಿಸಲು ಸಾರ್ವಜನಿಕರು ಮುಗಿಬಿದ್ದರು. 

ಇದರಿಂದ ಉದ್ದದ ಸರತಿಯಲ್ಲಿ ಸಾಲುಗಟ್ಟಿ ಕಾಯುತ್ತಿದ್ದ ದೃಶ್ಯ ಕಂಡುಬಂತು.ಅಕ್ಕಿ ಗಾಡಿ ಬಂದ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಸುತ್ತಮುತ್ತಲ ಪ್ರದೇಶಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುತ್ತಿರುವುದನ್ನು ಗಮನಿಸಿದ ಪೊಲೀಸರು. 

ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ, ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಸರತಿ ಸಾಲಿನಲ್ಲಿ ಅಕ್ಕಿ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನೂಕುನುಗ್ಗಲು ತಪ್ಪಿದಂತಾಗಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಹೇಮಂತ ಕುಮಾರ, ಆಹಾರ ಧಾನ್ಯಗಳ ಮೌಲ್ಯ ಹೆಚ್ಚಾಗಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ, ರೈತರಿಂದ ನೇರವಾಗಿ ಜನತೆಗೆ ಆಹಾರ ಧಾನ್ಯ ಮುಟ್ಟಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. 

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕಾರಣದಿಂದ ಅನೇಕ ರೀತಿಯ ಅಭಾವಗಳು ಪ್ರಾರಂಭಗೊಂಡಿದ್ದು, ಚುನಾವಣೆಗೂ ಪೂರ್ವದಲ್ಲಿ ₹ ೩೫ ಇದ್ದ ಅಕ್ಕಿಯ ಬೆಲೆ ಇದೀಗ ₹ ೫೫ ಆಗಿದೆ. 

ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೋದಿ ಅವರು ತಂದಿರುವ ಈ ಯೋಜನೆ ಸಮರ್ಪಕವಾಗಿದ್ದು, ಜನರು ಪ್ರೀತಿಯಿಂದ ಸ್ವಾಗತಿಸಿದ್ದಾರೆ ಎಂದರು.

ಸೋಮವಾರ (ಫೆ.೧೨) ಇಲ್ಲಿನ ಪುರಭವನದಲ್ಲಿ ವ್ಯವಸ್ಥಿತವಾಗಿ ಭಾರತ ಅಕ್ಕಿ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಅನಗತ್ಯವಾಗಿ ನೂಕುನುಗ್ಗಲು ಸೃಷ್ಟಿಸದೇ ಶಿಸ್ತಿನಿಂದ ರಸೀದಿ ಪಡೆದು ಅಕ್ಕಿ ಪಡೆಯಬೇಕಿದೆ ಎಂದರು.

ತಿಂಗಳಿಗೆ ೬ ದಿನ ಭಾರತ್‌ ಅಕ್ಕಿಯ ಮಾರಾಟ ಕುಮಟಾದಲ್ಲಿ ನಡೆಯಲಿದ್ದು ಮಾರಾಟದ ಖಚಿತ ದಿನಾಂಕಗಳನ್ನು ತಿಳಿಸಲಾಗುತ್ತದೆ ಎಂದು ಹೇಳಿದರು.