ಕನ್ನಡಪ್ರಭ ವಾರ್ತೆ ಕನಕಪುರ ನರೇಗಾ ಯೋಜನೆ ಅನುಷ್ಠಾನ ಸೇರಿ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸವಲತ್ತುಗಳ ಬಳಕೆ ಬಗ್ಗೆ ಸಭೆಯಲ್ಲಿ ತಿಳಿಸಿ ಕೊಡಲಾಗುತ್ತಿದೆ, ಜನರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಬಿ.ಆರ್ ಸಿ ರಾಜು ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ 2024-25 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತನಾಡಿದ ಅವರು, ವಾರ್ಷಿಕವಾಗಿ ನಡೆಯುವ ಈ ಸಭೆಯ ಮಹತ್ವವನ್ನು ಜನತೆ ಇಂದಿಗೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಎಷ್ಟೋ ಜನರಿಗೆ ಗ್ರಾಮ ಪಂಚಾಯಿತಿ ಎಂದರೇನು, ಅಲ್ಲಿ ಏನೇನು ಸವಲತ್ತುಗಳು ಸಿಗುತ್ತವೆ ಎಂಬುದರ ಮಾಹಿತಿ ಇರುವುದಿಲ್ಲ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.ರೈತರು ಸೇರಿದಂತೆ ಗ್ರಾಮದ ಅಭಿವೃದ್ಧಿಗಾಗಿ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಇದರಲ್ಲಿ ಮಾಡುವ ಕಾಮಗಾರಿಗಳನ್ನು ಹಣ ಪಡೆದ ಮೇಲೆ ನಾಶ ಮಾಡುವುದು, ಯೋಜನೆ ದುರ್ಬಳಕೆ ಮಾಡಿಕೊಳ್ಳುವುದು ಆಗದೇ ಸದ್ಬಳಕೆ ಆಗಬೇಕೆಂದು ಸಲಹೆ ನೀಡಿದರು.
ವಿಶೇಷ ಚೇತನರಿಗೆ ಸರ್ಕಾರವು ಸಾಕಷ್ಟು ಸವಲತ್ತು ಮತ್ತು ಅವರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದೆ, ಸಾಕಷ್ಟು ಮಂದಿಗೆ ಮಾಸಾಶನ ನಿಂತು ಹೋಗಿದೆ, ಇದೆಲ್ಲದಕ್ಕೂ ಏನು ಕಾರಣ ಎಂಬುದರ ಬಗ್ಗೆ ತಿಳಿಸಿಕೊಡಬೇಕು, ಅವರು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕೆಂದು ಹೇಳಿದರು.ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ಇಲ್ಲಿ ತಿಳಿಸಿ ಕೊಡುತ್ತಿದ್ದಾರೆ, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೆ ಅವರಿಗೆ ಇದರ ಉಪಯೋಗ ಆಗುತ್ತಿತ್ತು, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಸಭೆಗೆ ಬರಬೇಕೆಂದು ಕಿವಿಮಾತು ಹೇಳಿದರು.
ರೇಷ್ಮೆ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತು ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಸಾಮಾಜಿಕ ಪರಿಶೋಧನೆಯ ತಾಲೂಕು ಸಂಯೋಜಕಿ ಕಮಲಮ್ಮ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ 2024-25 ನೇ ಸಾಲಿನಲ್ಲಿ ಅನುಷ್ಠಾನ ಮಾಡಿರುವ ನರೇಗಾ ಕಾಮಗಾರಿ ಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಪಂಚಾಯಿತಿಯು 223 ಕಾಮಗಾರಿಗಳನ್ನು ಅನುಷ್ಠಾನ ಮಾಡಿದ್ದು ₹34,70,470 ಕೂಲಿ ಹಣ, ₹61,77,097 ಸಾಮಗ್ರಿ ಹಣ ಬಳಕೆ ಮಾಡಲಾಗಿದೆ. ಇವುಗಳಲ್ಲಿ ಎಂಬಿ ಬರೆಯದೆ 19 ಕಾಮಗಾರಿಗಳಿಗೆ ₹2,62,080 ಹಣ ಬಿಡುಗಡೆ ಮಾಡಲಾಗಿದೆ. ರಾಯಲ್ಟಿ ಹಣ ₹74,959 ಕಟ್ಟಿಸದೆ ಎಂಬಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.55 ಕಾಮಗಾರಿಗಳಿಗೆ ನಾಮಫಲಕದ ಬೋರ್ಡ್ ಇಲ್ಲ, 48 ಮಂದಿ ಉದ್ಯೋಗಿಗಳಿಗೆ ಕೂಲಿ ಹಣ ಬಿಡುಗಡೆಯಾಗಿದೆ, ಮೃತಪಟ್ಟಿರುವ ಮಾದಯ್ಯರಿಗೆ ನರೇಗಾ ಹಣ ಹೋಗಿದೆ, ಈ ಹಣವನ್ನು ಸರ್ಕಾರಕ್ಕೆ ವಾಪಸ್ಸು ಕಟ್ಟಿಸಿ ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಪಂಚಾಯಿತಿ ಆಡಳಿತಾಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್.ಎಂ.ಜಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಭೆ ನಡೆಸಿಕೊಟ್ಟರು. ಪಿಡಿಒ ಬಿ.ಎಂ.ಪವನ್ ಕುಮಾರ್, ತಾವು ಇಲ್ಲಿಗೆ ಹೊಸದಾಗಿ ಬಂದಿದ್ದು ನರೇಗಾ ಅನುಷ್ಠಾನದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಸಮಸ್ಯೆ ಗಳನ್ನು ಪರಿಹರಿಸಿ ಕೊಳ್ಳುವುದಾಗಿ ಸಭೆಗೆ ತಿಳಿಸಿದರು.ಪಂಚಾಯಿತಿ ಎಸ್ ಡಿ ಎ ಸುಮ ತಮ್ಮಣ್ಣಿ, ರೇಷ್ಮೆ ಇಲಾಖೆ ಪುಟ್ಟಮಾದು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
-----------