ಭೀಮಾ ನೀರಿಗಾಗಿ ಬೀದಿಗಿಳಿದ ಅಫಜಲ್ಪುರ ಮಂದಿ

| Published : Mar 21 2024, 01:00 AM IST

ಭೀಮಾ ನೀರಿಗಾಗಿ ಬೀದಿಗಿಳಿದ ಅಫಜಲ್ಪುರ ಮಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಬತ್ತಿ ಹೋಗಿರುವ ಭೀಮಾ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಬುಧವಾರ ನಡೆದ ಅಫಜಲ್ಪುರ ಬಂದ್‌ ಯಶಸ್ವಿಯಾಯ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬತ್ತಿ ಹೋಗಿರುವ ಭೀಮಾ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಆಗ್ರಹಿಸಿ ಬುಧವಾರ ನಡೆದ ಅಫಜಲ್ಪುರ ಬಂದ್‌ ಯಶಸ್ವಿಯಾಯ್ತು.

ಅಫಜಲ್ಪುರ ಪಟ್ಟಣದ ಸಾರ್ವಜನಿಕರು, ವ್ಯಾಪಾರಸ್ಥರು, ಉದ್ದಿಮೆದಾರರು, ವರ್ತಕರ ಸಂಘದ ಮುಖ್ಯಸ್ಥರು, ವಾಹನ ಚಾಲಕರು, ಔಷದ ಮಳಿಗೆ ವ್ಯಾಪಾರಸ್ಥರು, ಆಟೋಮೊಬೈಲ್ಸ್ ಅಂಗಡಿ ಮಾಲೀಕರು, ಆಟೋ ಸಂಘದವರು ಸೇರಿದಂತೆ ವಿವಿಧ ಸ್ತರದ ಸಂಘಟನೆಗಳವರು, ಹೋರಾಟಗಾರರು ಪಕ್ಷಭೇದ ಮರೆತು ಭೀಮಾ ನದಿಗೆ ನೀರು ಹರಿಸುವ ಸಲುವಾಗಿ ಆರಂಭವಾಗಿರುವ ಹೋರಾಟದಲ್ಲಿ ಒಂದಾದರಲ್ಲದೆ ಒತ್ತಡ ಹೆಚ್ಚುವಂತಾಗಲು ಸಂಪೂರ್ಣ ಬಂದ್‌ ಇರುವಂತೆ ನೋಡಿಕೊಂಡರು.

ಬಹುತೇಕ ಸಂಘಟನೆಗಳ ಮುಖ್ಯಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸ್ವಯಂಪ್ರೇರಿತರಾಗಿ ಭೀಮಾ ನದಿಗಾಗಿ ನಡೆದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು, ಈ ಹೋರಾಟದಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಅಫಜಲ್ಪುರ ಮುಖ್ಯರಸ್ತೆ, ಬಸ್ ನಿಲ್ದಾಣ, ಕಲಬುರಗಿ- ಅಫಜಲ್ಪುರ ರಸ್ತೆಯಲ್ಲಿನ ಮಳಿಗೆ ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿರುವ ಮೂಲಕ ಜನತೆ ನೀರಿಗಾಗಿ ನಡೆದಿರುವ ಹೋರಾಟಕ್ಕೆ ಬೆಂಬಲಿಸಿದರು. ಬೆಳಗ್ಗೆಯಿಂದಲೇ ಅಫಜಲ್ಪುರದಲ್ಲಿ ರಸ್ತೆಗಳಲ್ಲಿ ವಾಹನ, ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.

ಭೀಮಾ ನದಿಗಾಗಿ ನಡೆದ ಹೋರಾಟದಲ್ಲಿಯೂ ಪಾಲ್ಗೊಂಡು ಬೆಂಬಲ ಸೂಚಿಸಿದ್ದ ಅಫಜಲ್ಪುರ ಸೇರಿದಂತೆ ಸುತ್ತಲಿನ ವಿವಿಧ ಮಠಗಳ ಮಠಾಧೀಶರುಗಳೂ ಸಹ ಬುಧವಾರದ ಬಂದ್‌ನಲ್ಲಿ ಸಕ್ರೀಯರಾಗಿ ಪಾಲ್ಗೊಂಡಿದ್ದಲ್ಲದೆ ನದಿಗೆ ಮಹಾರಾಷ್ಟ್ರದಿಂದ ಕುಡಿಯುವ ನೀರು ತುರ್ತಾಗಿ ಹರಿಸಬೇಕು ಎಂದ ಆಗ್ರಹಿಸಿದರು.

ಅಫಜಲ್ಪುರ ಮಳೇಂದ್ರ ಮಠದ ಗುರುಗಳು, ಬಡದಾಳ ಚೆನ್ನಮಲ್ಲೇಶ್ವರ ಶ್ರೀಗಳು ಸೇರಿದಂತೆ ಅನೇಕರು ಹೋರಾಟದ ಸ್ಥಳದಲ್ಲಿ ಪಾಲ್ಗೊಂಡು ಭೀಮಾ ನದಿಗೆ ನೀರು ಬಿಟ್ಟು ಜನ- ಜಾನುವಾರು ಜೀವ ಉಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಹೋರಾಟಗಾರ ಶಿವಕುಮಾರ್‌ ಆರೋಗ್ಯ ಕ್ಷೀಣ: ಭೀಮಾ ನದಿಗೆ ನೀರು ಹರಿಸುವ ಹೋರಾಟದ ಮುಂಚೂಣಿಯಲ್ಲಿರುವ ಶಿವಕುಮಾರ್‌ ನಾಟೀಕಾರ್‌ ಅವರು ಕಳೆದ 6 ದಿನಿದಂದ ಉಪವಾಸ ಇರೋದರಿಂದ ಅವರ ಆರೋಗ್ಯ ಸಂಪೂರ್ಣ ಕ್ಷೀಣಿಸಿದೆ.

ಅಮರಣಾಂತ ಉಪವಾಸದಿಂದ ನಾಟೀಕಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡಿದ್ದರಿಂದ ಇವರ ಆರೋಗ್ಯ, ದೇಹಸ್ಥಿತಿ ಮೇಲೆ ನಿಗಾ ಇಟ್ಟಿರುವ ವೈದ್ಯರ ತಂಡ ಹೋರಾಟದ ಟೆಂಟ್‌ನಲ್ಲಿಯೇ ಆ್ಯಂಬುಲೆನ್ಸ್‌ ಸಮೇತ ಬೀಡುಬಿಟ್ಟಿದೆ. ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹೋರಾಟಗಾರರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.