ಡಾ. ಅಂಬೇಡ್ಕರ್ ಪರಿನಿರ್ವಾಣ ದಿನ

| Published : Dec 07 2024, 12:31 AM IST

ಸಾರಾಂಶ

ಡಾ. ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧನ ವಿಗ್ರಹ ಒಳಗೊಂಡ ಸ್ತಬ್ಧಚಿತ್ರದೊಂದಿಗೆ ಮಕ್ಕಳು, ಹಿರಿಯರು, ಮಹಿಳೆಯರು ಮೇಣದ ಬತ್ತಿ ಹಿಡಿದು ಅಶೋಕಪುರಂನ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ನಗರದ ವಿವಿಧೆಡೆ ಶುಕ್ರವಾರ ಸಂಜೆ ಮೇಣದಬತ್ತಿ ಮೆರವಣಿಗೆ ನಡೆಯಿತು.ನಗರದ ಅಶೋಕಪುರಂ ಜನತೆ ವತಿಯಿಂದ ಭೀಮ ಜ್ಯೋತಿ ಮೆರವಣಿಗೆ ನಡೆಸಿ, ಡಾ. ಅಂಬೇಡ್ಕರ್ ಅವರಿಗೆ ಮಹಾ ನಮನ ಸಲ್ಲಿಸಲಾಯಿತು. ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.ನಂತರ ಡಾ. ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧನ ವಿಗ್ರಹ ಒಳಗೊಂಡ ಸ್ತಬ್ಧಚಿತ್ರದೊಂದಿಗೆ ಮಕ್ಕಳು, ಹಿರಿಯರು, ಮಹಿಳೆಯರು ಮೇಣದ ಬತ್ತಿ ಹಿಡಿದು ಅಶೋಕಪುರಂನ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು.ಈ ಮೆರವಣಿಗೆಯಲ್ಲಿ ನಟ ಚೇತನ್ ಅಹಿಂಸ, ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಲೇಖಕ ಸಿದ್ಧಸ್ವಾಮಿ, ಪವಿತ್ರಾ, ಶಿವಣ್ಣ ಮೊದಲಾದವರು ಪಾಲ್ಗೊಂಡಿದ್ದರು. ಲಲಿತಮಹಲ್ ಮೈದಾನಡಾ.ಬಿ.ಆರ್. ಅಂಬೇಡ್ಕರ್ ಸ್ನೇಹ ಸೌಹಾರ್ದ ಸಂಘವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಲಲಿತಮಹಲ್ ಮೈದಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಅಮ್ಮ ರಾಮಚಂದ್ರ ತಂಡ ಗೀತ ನಮನ ಸಲ್ಲಿಸಿದರು. ಬಳಿಕ ಎಲ್ಇಡಿ ಪರದೆ ಮೇಲೆ ಅಂಬೇಡ್ಕರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.ಸಂಘದ ಅಧ್ಯಕ್ಷ ಗಿರೀಶ್ ಚಂದ್ರ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಮಹದೇವಯ್ಯ, ತುಳಸಿ ಅಂಕಯ್ಯ, ಲೋಕೇಶ್ವರ್ ಮೊದಲಾದವರು ಇದ್ದರು.ವಿವಿಧೆಡೆ ಮೇಣದ ಬತ್ತಿ ಮೆರವಣಿಗೆಇನ್ನೂ ಗಾಂಧಿನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಮಹಾಸಭಾ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರ ಹಾಗೂ ಬುದ್ಧನ ವಿಗ್ರಹ ಒಳಗೊಂಡ ಸ್ತಬ್ಧಚಿತ್ರದೊಂದಿಗೆ ಮೇಣದ ಬತ್ತಿ ಮೆರವಣಿಗೆ ನಡೆಸಲಾಯಿತು. ಅಂಬೇಡ್ಕರ್ ವೃತ್ತದಲ್ಲಿರುವ (ಎಫ್ ಟಿಎಸ್ ವೃತ್ತ) ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಕ್ರಾಂತಿಗೀತೆಗಳನ್ನು ಹಾಡಲಾಯಿತು. ಫೈವ್ ಲೈಟ್ ವೃತ್ತ, ಅಶೋಕ ವೃತ್ತ, ನೆಹರು ವೃತ್ತ, ಇರ್ವಿನ್ ರಸ್ತೆ ಸೇರಿದಂತೆ ವಿವಿದ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಪುರಭವನದ ಆವರಣ ತಲುಪಿ, ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಲಾಯಿತು. ಪಡುವಾರಹಳ್ಳಿಯ ಅಂಬೇಡ್ಕರ್ ಹಿತರಕ್ಷಣಾ ಸಮಿತಿ ವತಿಯಿಂದ ಮಾತೃ ಮಂಡಳಿ ಶಾಲೆಯ ಡಾ.ಬಿ.ಆರ್. ಅಂಬೇಡ್ಕರ್ ಆಟೋ ನಿಲ್ದಾಣದ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೇಣದಬತ್ತಿ ಹಿಡಿದು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಭೀಮಜ್ಯೋತಿ ಮೆರವಣಿಗೆ ಹಾಗೂ ಮನೆ ಮನೆ ಧಮ್ಮ ದೀಪೋತ್ಸವ ನಡೆಸಿ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಲಾಯಿತು.