ಸಾರಾಂಶ
ಜನರ ಅಭಿಲಾಷೆಯನ್ನು ತಿರಸ್ಕರಿಸಿ ಸ್ವಾರ್ಥ ರಾಜಕೀಯಕ್ಕೆ ಬಳಸಲು ಮುಂದಾದ ಶ್ರೀ ರಾಮುಲು ಅವರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಟ್ಟೂರು
ಬಳ್ಳಾರಿ ಲೋಕಸಭಾ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ಈ ಹಿಂದೆ ಲೋಕಸಭೆಗೆ ಸ್ಪರ್ಧಿಸಿದ್ದ ಬಿ. ಶ್ರೀರಾಮುಲು ಅವರನ್ನು ಆಯ್ಕೆ ಮಾಡಿದ್ದರು. ಆದರೂ ಮತದಾರರ ಅಭಿಪ್ರಾಯ ಪಡೆಯದೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಾರಣಕ್ಕಾಗಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜನತೆ ನೀಡಿದ ಆರ್ಶೀವಾದವನ್ನು ತಿರಸ್ಕರಿಸಿ ಸ್ವಾರ್ಥಕ್ಕೆ ಮುಂದಾದರು. ಈ ಕಾರಣಕ್ಕಾಗಿ ಈ ಬಾರಿ ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಚುನಾಯಿಸಲು ಮುಂದಾಗಿದ್ದಾರೆ ಎಂದು ಸಂಡೂರು ಶಾಸಕ, ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.ಸೋಮವಾರ ರಾತ್ರಿ ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಆಗಮಿಸಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯಿಂದ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಕ್ಷೇತ್ರದೆಲ್ಲಡೆ ಪ್ರಚಾರಕ್ಕೆಂದು ತೆರಳಿದಾಗ ಜನತೆಯ ಅಭಿಲಾಷೆ ಮತ್ತು ಮನೋಭಿಲಾಷೆ ನನ್ನ ಪರವಾಗಿ ವ್ಯಕ್ತವಾಗುತ್ತಿದೆ. ಅಲ್ಲದೆ, ಜನರ ಅಭಿಲಾಷೆಯನ್ನು ತಿರಸ್ಕರಿಸಿ ಸ್ವಾರ್ಥ ರಾಜಕೀಯಕ್ಕೆ ಬಳಸಲು ಮುಂದಾದ ಶ್ರೀ ರಾಮುಲು ಅವರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಜನತೆಯ ಈ ತೆರೆನಾದ ಅಭಿಪ್ರಾಯ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಬಳ್ಳಾರಿ ಮತ್ತು ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಕ್ಷದ ಪ್ರತಿಯೊಬ್ಬರು ನನ್ನ ಗೆಲುವಿಗೆ ಸಹಕಾರಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.