ಮೋದಿ ಮೋಡಿಗೊಳಗಾದ ದಾವಣಗೆರೆ ಜನ!
KannadaprabhaNewsNetwork | Published : Apr 29 2024, 01:31 AM IST
ಮೋದಿ ಮೋಡಿಗೊಳಗಾದ ದಾವಣಗೆರೆ ಜನ!
ಸಾರಾಂಶ
ಲೋಕಸಭೆ 2ನೇ ಹಂತದ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಿಂಚಿನ ಸಂಚಾರ ನಡೆಸುವ ಮೂಲಕ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ-ಹಾವೇರಿ, ವಿಜಯ ನಗರ ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆಲೋಕಸಭೆ 2ನೇ ಹಂತದ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಿಂಚಿನ ಸಂಚಾರ ನಡೆಸುವ ಮೂಲಕ ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ-ಹಾವೇರಿ, ವಿಜಯ ನಗರ ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಉರಿ ಬಿಸಿಲಿನ ಮಧ್ಯೆಯೂ ಬೆಳಗ್ಗೆಯಿಂದಲೇ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ವಿಪರೀತ ಸೆಕೆ ಮಧ್ಯೆ ನರೇಂದ್ರ ಮೋದಿ ನೋಡುವ, ಮೋದಿ ಮಾತಿನ ಮೋಡಿಗೆ ಒಳಗಾಗುವ, ಹರ್ಷೋದ್ಘಾರ ಮೊಳಗಿಸುವ ಉಮೇದಿನಿಂದಲೇ ಬಂದಿದ್ದ ಜನರಿಗೆ ನರೇಂದ್ರ ಮೋದಿ ನಿರಾಸೆಗೊಳಿಸಲಲ್ಲವಾದರೂ, ಮೋದಿಯ ವಾಗ್ಭಾಣದಿಂದ ಮಾತುಗಳು ಅಷ್ಟಾಗಿ ಬರಲಿಲ್ಲವೆಂಬ ಕೊರಗು ಜನರಲ್ಲಿತ್ತು. ಬೆಳಗಾವಿ, ಶಿರಸಿಯಲ್ಲಿ ಬಹಿರಂಗ ಸಭೆ ಮುಗಿಸಿಕೊಂಡು ಇಲ್ಲಿನ ಜಿಎಂಐಟಿ ಹೆಲಿಪ್ಯಾಡ್‌ಗೆ ವಿಶೇಷ ಭದ್ರತೆಯಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬರುವಾಗಲೇ ಜಿಎಂಐಟಿ ಅತಿಥಿ ಗೃಹದಲ್ಲಿ ಬೆಣ್ಣೆದೋಸೆ ಸವಿದು ಬಂದಿದ್ದರೇನೋ ಎಂಬಂತೆ ಐದು ಸಲ ದಾವಣಗೆರೆಗೆ ಬಂದರೂ ಎಂದಿಗೂ ಬೆಣ್ಣೆದೋಸೆ ಬಗ್ಗೆ ಮಾತನಾಡದಿದ್ದ ಮೋದಿ, ಇಂದು ಮಾತ್ರ ಮುಕ್ತವಾಗಿ ಮಾತನಾಡುತ್ತಾ, ಬಿಜೆಪಿ ವಿಜಯೋತ್ಸವವನ್ನು ಬೆಣ್ಣೆದೋಸೆ ಸಂಭ್ರಮೋತ್ಸವವಾಗಿ ಜೂ.4ಕ್ಕೆ ಇಲ್ಲಿ ಆಚರಿಸುವಂತೆ ಮುಖಂಡರಿಗೆ ಕರೆ ನೀಡಿದರು. ಮೋದಿ ಆಗಮನಕ್ಕಾಗಿ ಇಡೀ ಊರಿನಾದ್ಯಂತ ವಾಹನ ಸಂಚಾರ, ಮಾರ್ಗ ಬದಲಾವಣೆ ಮಾಡಲಾಗಿತ್ತು. ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ, ಸಶಕ್ತರಿಂದ ಅಶಕ್ತರವರೆಗೆ ರಸ್ತೆಯ ಎರಡೂ ಬದಿ ಸಾವಿರಾರು ಸಂಖ್ಯೆಯಲ್ಲಿ ಮೋದಿ ಸಾಗುವುದನ್ನು ನೋಡಲು ಸೇರಿದ್ದರೆ, ಸುಮಾರು ಅಪಾರ ಸಂಖ್ಯೆ ಜನರು ಹೈಸ್ಕೂಲ್ ಮೈದಾನದ ಆವರಣ, ಪೆಂಡಾಲ್ ಒಳಗೆ ಜಮಾಯಿಸಿದ್ದರು. ಹೈಸ್ಕೂಲ್ ಮೈದಾನಕ್ಕೆ ಮೋದಿ ಆಗಮನದೊಂದಿಗೆ ಮಿಂಚಿನ ಸಂಚಲನ ಉಂಟಾಯಿತು. ಗತ್ತು ಗಾಂಭೀರ್ಯದಿಂದ ವೇದಿಕೆಗೆ ಆಗಮಿಸಿದ ಮೋದಿ ಜನರಿಗೆ ಕೈ ಮುಗಿಯುತ್ತಾ, ಕೈ ಬೀಸುತ್ತಾ ವೇದಿಕೆಯಲ್ಲಿ ಹೆಜ್ಜೆ ಹಾಕಿದರೆ ಮೋದಿ ಮೋದಿ ಮೋದಿ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿದವು. ಕನ್ನಡದಲ್ಲೇ ಮಾತು ಶುರು ಮಾಡಿದ ಮೋದಿ, ದಾವಣಗೆರೆಯ ಕ್ಷೇತ್ರದ ಜನರಿಗೆ ನನ್ನ ನಮಸ್ಕಾರಗಳು.. ಎಂದು ಎನ್ನುತ್ತಿದ್ದಂತೆಯೇ ಜನರು ಹರ್ಷ ವ್ಯಕ್ತಪಡಿಸಿದರು. ಮೋದಿ ಆಗಮನದಿಂದ ಪುಳಕಿತ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. 5 ಬಾರಿ ದಾವಣಗೆರೆಗೆ ಆಗಮಿಸಿದ ಮೋದಿ ಭಾಷಣ ಇನ್ನಷ್ಟು ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿತು. ಒಂದು ಗಂಟೆಗೂ ಹೆಚ್ಚು ಕಾಲ ಭಾಷಣದ ಮೂಲಕ ಮೋಡಿ ಮಾಡಿದ ಮೋದಿ ಹೊಸಪೇಟೆ ಸಮಾವೇಶಕ್ಕೆ ತೆರಳಿದರು.ಮೋದಿ ಭೇಟಿ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿತ್ತು. ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡ ರಸ್ತೆಗಳಲ್ಲಿ ಹೋಟೆಲ್, ಅಂಗಡಿ, ವಾಣಿಜ್ಯ ಸಂಕೀರ್ಣ ಶನಿವಾರದಿಂದಲೇ ಮುಚ್ಚಿಸಲಾಗಿತ್ತು. ಹೈಸ್ಕೂಲ್ ಮೈದಾನ ಸಂಪರ್ಕಿಸುವ ಪ್ರತಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಹಿಸಲಾಗಿತ್ತು. ಖಾಸಗಿ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಅಕ್ಕ ಮಹಾದೇವಿ ರಸ್ತೆ, ಪ್ರವಾಸಿ ಮಂದಿರ ರಸ್ತೆ ಇತರೆಡೆ ಸಂಚಾರ ನಿರ್ಬಂಧಿಸಲಾಗಿತ್ತು. ಎತ್ತರದ ಕಟ್ಟಡಗಳಲ್ಲಿ ರಕ್ಷಣಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರು. ಬಿರು ಬಿಸಿಲಿನ ನಡುವೆಯೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.ಮಧ್ಯಾಹ್ನಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಜನರು ಬೆಳಗ್ಗೆ 10ರಿಂದಲೇ ಮೈದಾನಕ್ಕೆ ಲಗ್ಗೆ ಇಟ್ಟಿದ್ದರು. ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದರು. ದಾವಣಗೆರೆ, ಹಾವೇರಿ ಕ್ಷೇತ್ರಗಳ ವಿವಿಧ ತಾಲೂಕುಗಳಿಂದ ಬಸ್, ಕಾರು, ಟಿಟಿ, ಮಿನಿ ಬಸ್ಸು, ಬೈಕ್ ಮೂಲಕ ಜನರು ಆಗಮಿಸಿದ್ದರು. ಸಮಾವೇಶದ ದಶದಿಕ್ಕುಗಳಲ್ಲೂ ಎತ್ತ ನೋಡಿದರೂ ಜನಸಾಗರವೇ ಕಂಡು ಬಂದಿತ್ತು. ಬೆಳಗ್ಗೆಯಿಂದ ಮೋದಿ ಆಗಮನದವರೆಗೂ ಜನರ ಉತ್ಸಾಹ ಬತ್ತಿರಲಿಲ್ಲ. ಮೋದಿ ಹೆಸರೇಳುತ್ತಿದ್ದಂತೆ ಜನರು ಕೇಕೆ ಹಾಕುತ್ತ... ಕೇಸರಿ ಶಾಲು ಬೀಸುತ್ತಿದ್ದರು. ಎಲ್ಲೆಡೆ ಕೇಸರಿ ವಾತಾವರಣ ಇತ್ತು. ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಪರ ಘೋಷಣೆಗಳನ್ನು ಕೂಗಿದ್ದು ಕಂಡುಬಂದಿತು. ಮೋದಿಯವರ ಆಳೆತ್ತರದ ಕಟೌಟ್ ಪ್ರದರ್ಶಿಸುವ ಮೂಲಕ ಮೋದಿಗೆ ಜೈಕಾರ ಹಾಕಿದರು. ಅಪ್ಪು ಖ್ಯಾತಿಯ ಪುನೀತ್ ರಾಜಕುಮಾರರ ನೀನೇ ರಾಜಕುಮಾರ ಹಾಡಿಗೆ ಜನರು ಸಹ ಸಾಥ್ ನೀಡಿದ್ದು ವಿಶೇಷವಾಗಿತ್ತು.. ಜನರು ಕೂಡ ಮೋದಿಜಿಯವರಿಗೆ ನೀನೆ ರಾಜಕುಮಾರ ಎಂದು ಗುಣಗಾನ ಮಾಡಿದರು. ಕೆಲವರಂತೂ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಅಭಿಮಾನ ಹಾಗೂ ಸಂತಸ ವ್ಯಕ್ತಪಡಿಸಿದರು.