ಭ್ರಷ್ಟಾಚಾರ,ಸುಳ್ಳು ಭರವಸೆಗೆ ತಕ್ಕ ಪಾಠ ಕಲಿಸಿದ ದೆಹಲಿ ಜನತೆ: ಸಂಸದ ಗೋವಿಂದ ಕಾರಜೋಳ

| N/A | Published : Feb 10 2025, 01:48 AM IST / Updated: Feb 10 2025, 12:30 PM IST

ಭ್ರಷ್ಟಾಚಾರ,ಸುಳ್ಳು ಭರವಸೆಗೆ ತಕ್ಕ ಪಾಠ ಕಲಿಸಿದ ದೆಹಲಿ ಜನತೆ: ಸಂಸದ ಗೋವಿಂದ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

 ಕೇಜ್ರಿವಾಲ್   ಸುಳ್ಳು ಭರವಸೆಗೆ ಬೇಸತ್ತು ಮತದಾರರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ 27 ವರ್ಷದ ನಂತರ ಬಿಜೆಪಿ ಪಕ್ಷಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ. 

  ಮುಧೋಳ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ಮತ್ತು ಸುಳ್ಳು ಭರವಸೆಗೆ ಬೇಸತ್ತು ಮತದಾರರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ 27 ವರ್ಷದ ನಂತರ ಬಿಜೆಪಿ ಪಕ್ಷಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ತಕ್ಕಪಾಠ ಕಲಿಸಿದ್ದಾರಲ್ಲದೆ ಕಾಂಗ್ರೆಸ್ ಕ್ಕೆ ಭವಿಷ್ಯವಿಲ್ಲದಂತೆ ಮಾಡಿದ್ದಾರೆಂದು ಬಿಜೆಪಿಯ ಚಿತ್ರದುರ್ಗದ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದರೂ ಅಭಿವೃದ್ಧಿ ಕೆಲಸ ಕೈಗೊಳ್ಳದೆ, ಉಚಿತ ಯೋಜನೆ ನೀಡಿ ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದ್ದಾರೆ. ಬಾಕಿ ಹಣ ನೀಡದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮೊದಲು ಗುತ್ತಿಗೆದಾರರ ಬಾಕಿ ಹಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. 

ಕಾಂಗ್ರೆಸ್ ಸರ್ಕಾರ ನೀರಾವರಿ ಮತ್ತು ಕೃಷ್ಣಾ ಕಣಿವೆ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಯುಕೆಪಿ ಸಂತೃಸ್ತರಿಗೆ ಪರಿಹಾರ ಕೂಡ ಸಿಗುತ್ತಿಲ್ಲ, ಅದಕ್ಕಾಗಿ ತಾವು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ತಾವು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತುಕತೆ ಮಾಡಿರುವುದಾಗಿ ತಿಳಿಸಿದ ಅವರು, ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದು ಹೇಳಿದರು.

ನಾನು ಬಿಜೆಪಿ ತತ್ವ, ಸಿದ್ಧಾಂತ ನಂಬಿದ್ದೇನೆ. ಪಕ್ಷ ಎಂದರೆ ಅದು ತಾಯಿ ಇದ್ದಂತೆ, ತಾಯಿಗೆ ಯಾವತ್ತೂ ಅನ್ಯಾಯ ಮಾಡಬಾರದು. ನಾನು ಯಾವುದೇ ಗುಂಪಿಗೆ ಸೇರಿದವನಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ಯಾರನ್ನು ರಾಜ್ಯಧ್ಯಕ್ಷರನ್ನಾಗಿ ಮಾಡುತ್ತಾರೆ. ಅವರನ್ನು ನಾವೆಲ್ಲರೂ ಸ್ವಾಗತಿಸಿ, ಪಕ್ಷದ ಸಂಘಟನೆ ಮಾಡುವ ಕೆಲಸ ಮಾಡಬೇಕೆಂದ ಅವರು, ಮುಧೋಳ ಘಟಪ್ರಭಾ ನದಿ ಪಾತ್ರದ ಜನರು ಎಚ್ಚರಗೊಂಡು ನದಿಯ ಮರಳು ಖದೀಮರಿಗೆ ಅವಕಾಶ ನೀಡಬಾರದು, ನದಿಯ ಮರಳು ಖಾಲಿ ಆಗದಂತೆ ನೋಡಿಕೊಳ್ಳಬೇಕೆಂದರು.

ಫೆ.22ರಿಂದ 24ರ ವರೆಗೆ ಬೆಳಗಲಿ-ಮುಧೋಳದಲ್ಲಿ ನಡೆಯಲಿರುವ ರನ್ನ ಉತ್ಸವಕ್ಕೆ ತಮ್ಮದು ಸಂಪೂರ್ಣ ಬೆಂಬಲವಿದೆ, ಮುಧೋಳದ ಹೆಸರು ರಾಜ್ಯದೆಲ್ಲಡೆ ಪಸರಿಸಬೇಕು, ಈ ಉತ್ಸವ ಮೈಸೂರು ದಸರಾ ಮಾದರಿಯಂತೆ ನಡೆಯಲಿ ಎಂಬುದು ನನ್ನ ಮನದಾಸೆಯಾಗಿದೆ ಎಂದು ಹೇಳಿ ಯಾವುದೇ ಕಾರಣಕ್ಕೂ ಸಾರ್ವಜನಿಕರಿಂದ ಒತ್ತಾಯದ ಮೇರೆಗೆ ಹಣ ಸಂಗ್ರಹಿಸಬಾರೆಂದು ಸೂಚ್ಯವಾಗಿ ಹೇಳಿದರು.

ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಸದಾಶಿವ ತೇಲಿ, ಹನುಮಂತ ತುಳಸಿಗೇರಿ, ಅರುಣ ಕಾರಜೋಳ, ಬಸವರಾಜ ಮಳಲಿ, ಡಾ.ರವಿ ನಂದಗಾಂವ, ಶ್ರೀಕಾಂತ ಗುಜ್ಜನ್ನವರ, ನಾಗಪ್ಪ ಅಂಬಿ, ಸಂಗಣ್ಣ ಕಾತರಕಿ, ವಿವೇಕಾನಂದ ಪಾಟೀಲ, ಸದಾಶಿವ ಇಟಕನ್ನವರ, ಸೋನಾಪ್ಪಿ ಕುಲಕರ್ಣಿ, ಅನಂತ ಘೋರ್ಪಡೆ, ಗುರುಪಾದ ಕುಳಲಿ ಇತರರು ಇದ್ದರು.