ಹುಬ್ಬಳ್ಳಿ:

ಹೋಳಿ ಹುಣ್ಣಿಮೆಯ 5ನೇ ದಿನವಾದ ಶನಿವಾರ ನಗರವೆಲ್ಲ ಬಣ್ಣದೋಕುಳಿಯಲ್ಲಿ ಮಿಂದೆದ್ದಿತು. ಸುಡು ಬಿಸಿಲನ್ನು ಲೆಕ್ಕಿಸದೇ ಯುವ ಜನತೆ, ಪುಟ್ಟ ಮಕ್ಕಳು ರೇನ್‌ ಡ್ಯಾನ್ಸ್‌, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹೊಸ ಮೇದಾರ ಓಣಿ, ಕಮರಿಪೇಟೆ, ಬಾನಿ ಓಣಿ, ತೋಳನಕೆರೆ ವೃತ್ತ, ಅಶೋಕ ನಗರದ ಬ್ರಿಡ್ಜ್‌ ಬಳಿ, ಮರಾಠಾಗಲ್ಲಿ ಹೊಸ ಮೇದಾರ ಓಣಿಯಲ್ಲಿ ನಿರ್ಮಿಸಲಾಗಿದ್ದ ರೇನ್‌ ಡ್ಯಾನ್ಸ್‌ ಹಾಗೂ ಡಿಜೆಗೆ ಜನರು ಕುಣಿದು ಸಂಭ್ರಮಿಸಿದರು.

ಮೇದಾರ ಓಣಿ, ಮರಾಠಾಗಲ್ಲಿ, ಕಮರಿಪೇಟೆ, ಅಂಚಟಗೇರಿ ಓಣಿ, ಚೆನ್ನಪೇಟ, ಅವರಾದಿ ಓಣಿ, ವೀರಾಪುರ ಓಣಿ, ಹೆಗ್ಗೇರಿ, ಹೊಸೂರು, ವೀರಾಪುರ ಓಣಿ, ಶೀಲವಂತರ ಓಣಿ, ನೇಕಾರ ನಗರ, ಬಂಕಾಪುರ ಚೌಕ್, ಜಂಗ್ಲಿಪೇಟ, ಅಕ್ಕಿಪೇಟ, ಇಂಡಿಪಂಪ್ ಬಳಿ, ಹಳೇ ಹುಬ್ಬಳ್ಳಿ, ವಿದ್ಯಾನಗರ, ಗೋಕುಲ ರಸ್ತೆ, ದುರ್ಗದ ಬೈಲ್, ಲೋಹಿಯಾನಗರ, ಶಿರೂರ ಪಾರ್ಕ್, ದೇಶಪಾಂಡೆ ನಗರ, ಕೇಶ್ವಾಪುರ, ಲಿಂಗರಾಜ ನಗರ, ದಾಜಿಬಾನ್ ಪೇಟೆ, ಕುಸುಗಲ್ಲ ರಸ್ತೆ, ಕಮರಿಪೇಟೆ, ನೇಕಾರ ನಗರ ಸೇರಿದಂತೆ ವಿವಿಧ ಭಾಗದಲ್ಲಿ ಮಕ್ಕಳು, ಮಹಿಳೆಯರು ಮನೆ, ಪ್ರಮುಖ ವೃತ್ತಗಳಲ್ಲಿ ಸೇರಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.

ಮಧ್ಯಾಹ್ನ ಹೆಚ್ಚಿದ ಸಂಭ್ರಮ:

ಬೆಳಗಾಗುತ್ತಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಬಣ್ಣದೋಕುಳಿ ಸಣ್ಣ ಪ್ರಮಾಣದಲ್ಲಿ ಆರಂಭವಾಯಿತು. ಬಿಸಿಲಿನ ಪ್ರಖರತೆ ಎರುತ್ತಿದ್ದಂತೆ ಹಬ್ಬವೂ ರಂಗು ಪಡೆಯಿತು.


ಸೌಹಾರ್ದತೆಯ ಹೋಳಿ ಆಚರಣೆ:

ಹಳೇ ಹುಬ್ಬಳ್ಳಿ, ಕಮರಿಪೇಟೆ ಸೇರಿದಂತೆ ಹಲವೆಡೆ ಹಿಂದೂ-ಮುಸ್ಲಿಂ ಬಾಂಧವರು ಬಣ್ಣದೋಕುಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದರು. ಪರಸ್ಪರ ಹೂ ಮಾಲೆ ಹಾಕಿ, ಬಣ್ಣ ಹಚ್ಚಿ ಸಂಭ್ರಮಿಸಿದರು. ಮುಸಲ್ಮಾನ ಬಾಂಧವರು ಹಲವೆಡೆ ತಂಪು ಪಾನೀಯ ಹಂಚಿದರು. ಪ್ರತಿ ವರ್ಷವೂ ಬಣ್ಣದೋಕುಳಿಗೆ ಇಲ್ಲಿನ ಚೆನ್ನಮ್ಮ ವೃತ್ತ ಪ್ರಮುಖ ಆಕರ್ಷಣಿಯ ಕೇಂದ್ರವಾಗುತ್ತಿತ್ತು. ಮೇಲ್ಸೇತುವೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ಬಾರಿ ಸಂಭ್ರಮಾಚರಣೆ ಕಂಡುಬರಲಿಲ್ಲ.

ದಹನ:

ಐದು ದಿನಗಳಿಂದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ರತಿ-ಮನ್ಮಥರ ಮೂರ್ತಿಗಳನ್ನು ಟ್ರಾಕ್ಟರ್‌, ಟಂಟಂ, ತಳ್ಳುಗಾಡಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ದಹನ ಮಾಡಲಾಯಿತು. ಯುವಜನತೆ ಬೈಕ್‌, ಸ್ಕೂಟಿಯಲ್ಲಿ ವಿವಿಧ ಮುಖವಾಡ, ವೇಷ ಧರಿಸಿಕೊಂಡು ತಮಟೆ ಬಾರಿಸುತ್ತಾ, ಎದುರಿಗೆ ಬಂದವರಿಗೆ ಬಣ್ಣ ಎರಚುತ್ತಾ ನಗರವನ್ನು ಪ್ರದಕ್ಷಿಣೆ ಹಾಕಿದರು.

ಮಹಾಸಂಗಮ:

ಮೇದಾರ ಸಮಾಜದ ವತಿಯಿಂದ ಹಳೇಹುಬ್ಬಳ್ಳಿ ಮತ್ತು ಹೊಸಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸುವ 20 ಅಡಿ ಎತ್ತರದ ಬೃಹದಾಕಾರದ ಬಿದರಿನ ಕಾಮಣ್ಣನಿಗೆ ಇತಿಹಾಸವಿದ್ದು ದುರ್ಗದ ಬೈಲಿನಲ್ಲಿ ಶತ-ಶತಮಾನಗಳಿಂದ ಈ ಎರಡೂ ಕಾಮಣ್ಣರ ಮಹಾಸಂಗಮ ನಡೆಯುತ್ತಿತ್ತು. ಆದರೆ, 45 ವರ್ಷಗಳಿಂದ ವಿವಿಧ ಕಾರಣಾಂತರಗಳಿಂದ ನಿಂತು ಹೋಗಿತ್ತು. ಕಳೆದೆರಡು ವರ್ಷದಿಂದ ಮತ್ತೆ ಮಹಾಸಂಗಮವಾಗುತ್ತಿದ್ದು ಶನಿವಾರ ಸಂಜೆ ದುರ್ಗದ ಬೈಲ್‌ ಸಂಗಮವಾಗುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿತು.

ಕಟ್ಟೆಚ್ಚರ:

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆಯಿಂದ ನಗರದಲ್ಲಿ ಬೀಗಿ ಭದ್ರತೆ ಏರ್ಪಡಿಸಲಾಗಿತ್ತು. ಆಯ್ದ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ 90ಕ್ಕೂ ಅಧಿಕ ಸಿಸಿ ಕ್ಯಾಮೆರಾ, 5 ಡ್ರೋನ್‌ ಕ್ಯಾಮೆರಾ ಮೂಲಕ ಕಣ್ಣಿಡಲಾಗಿತ್ತು.