ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಮಹಾ ದಾಸೋಹ ಮನೆಯ 8ನೇ ಪೀಠಾಧಿಪತಿಗಳಾಗಿ 91ವರ್ಷ ಜನಮಾನಸದಲ್ಲಿದ್ದಂತಹ ಡಾ. ಶರಣಬಸವಪ್ಪ ಅಪ್ಪಾಜಿ ನಿಧನದಿಂದಾಗಿ ಕಲಬುರಗಿ ಸೇರಿದಂತೆ ಸುತ್ತೆಲ್ಲಾ ಭಕ್ತ ಜನಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಅನಾಥ ಪ್ರಜ್ಞೆ ಕಾಡಲಾರಂಭಿಸಿದೆ.
ನಮಗೆಲ್ಲಾರಿಗೂ ತಂದಯಂತೆ ಇದ್ದ ಅಪ್ಪಾಜಿ ಇನ್ನಿಲ್ಲ ಅನ್ನೋ ವಾರ್ತೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾವೀಗ ತಂದೆಯನ್ನ ಕಳೆದುಕೊಂಡ ಅನಾಥ ಪ್ರಜ್ಞೆಯಲ್ಲಿದ್ದೇವೆ, ಹೋಗಿ ಬನ್ನಿ ಅಪ್ಪಾಜಿ, ಮತ್ತೆ ಹುಟ್ಟಿ ಬನ್ನಿ... ಎಂದು ಶರಣಬಸವೇಶ್ವರ ಮಹಾ ಸಮಾಧಿಯ ಪಕ್ಕದ ಅನುಭವ ಮಂಟಪದ ಬಯಲಲ್ಲಿ ಡಾ. ಶರಣಬಸವಪ್ಪ ಅವರ ಪಾರ್ಥೀವ ಶರೀರದ ದರುಶನ ಪಡೆದು ಕಲಬುರಗಿ ಜನ ಕಣ್ಣೀರಾದ ನೋಟಗಳು ಕಂಡವು.ಅಚ್ಚುಮೆಚ್ಚಿನ ಅಪ್ಪಾಜಿ ಗಿದ್ರು: ಮಕ್ಕಳ ಶಾಲೆ, ಶುಲ್ಕ, ಸಂಸಾರ ಬಂಡಿ ನಡೆಸುವ ಸಮಸ್ಯೆ ಸೇರಿದಂತೆ ಅದ್ಯಾವುದೇ, ಏನೇ ಸಮಸ್ಯೆಗಳನ್ನು ಹೊತ್ತು ತಮ್ಮ ಬಳಿ ಬರುವವರಿಗೆ ಡಾ. ಅಪ್ಪಾಜಿ ನಸು ನಗುತ್ತಲೇ ಅದಕ್ಕೊದು ಪರಿಹಾರ ಕೊಡುವವರಾಗಿದ್ದರು,
ಅಪ್ಪಾಜಿಯವರ ಈ ಧೋರಣೆಯೇ ಭಕ್ತರನ್ನು ಬಹುವಾಗಿ ಸೆಳೆದಿತ್ತು. ಸಮಸ್ಯೆ ಮೂಟೆ ಹೊತ್ತು ಅಪ್ಪಾಜಿ ದರುಶನ ಪಡೆದರು. ಹೊರ ಬಂದಾಗ ಸಮಸ್ಯೆಗೆ ಪರಿಹಾರ ಸಿಕ್ಕು ಹಗುರಾಗ್ತಿದ್ವಿ ಎಂದು ಸಾಮಾನ್ಯ ಜನರೂ ಅಪ್ಪಾಜಿ ಮುಂದೆಯೇ ಕಣ್ಣೀರಿಟ್ಟ ನೋಟಗಳು ಕಂಡವು.ಅಲ್ಪಕಾಲದ ಅನಾರೋಗ್ಯದ ನಂತರ ಗುರುವಾರ ಕಲಬುರಗಿ ನಗರದ ತಮ್ಮ ಮಹಾ ದಾಸೋಹ ಮನೆಯಲ್ಲಿ ಶಿವಾಧೀನರಾದ ತತ್ವಜ್ಞಾನಿ ಮತ್ತು ದಾರ್ಶನಿಕ ಶಿಕ್ಷಣ ತಜ್ಞ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಕೊನೆಯ ಪಯಣದಲ್ಲಿ ಸಾವಿರಾರು ಭಕ್ತರನ್ನು ಅಗಲಿದ ಸಂತರಿಗೆ ಗೌರವ ಸಲ್ಲಿಸಿದರು.
ಪ್ರಸಕ್ತ ವರ್ಷ ಮುಂಬರುವ ನವೆಂಬರ್‌ನಲ್ಲಿ 91ವರ್ಷ ಪೂರೈಸಲಿದ್ದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಸಂಸ್ಥಾನದ ಹಾಗೂ ಕಲ್ಯಾಣ ಕರ್ನಾಟಕದ ಭಕ್ತರಿಗೆ "ಅಪ್ಪಾಜಿ " ಎಂದೇ ಅಚ್ಚುಮೆಚ್ಚಾಗಿದ್ದವರು.ಅವರು ಕಲಬುರಗಿ ಪ್ರದೇಶದ ಜನರಿಗೆ ತಂದೆಯಂತಹ ವ್ಯಕ್ತಿಯಾಗಿದ್ದರು, ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶವನ್ನು ಹಾಗೂ ಈ ಪ್ರದೇಶದ ಶಿಕ್ಷಣ ವಂಚಿತರಿಗೆ ಹೊಸ ಶೈಕ್ಷಣಿಕ ಅವಕಾಶಗಳನ್ನು ತೆರೆಯಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಡುವ ಮೂಲಕ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿಸುವಲ್ಲಿ ಸದಾಕಾಲ ದಾಪುಗಾಲು ಹಾಕುತ್ತಲೇ ಸಾಧನೆ ಮಾಡಿದವರು.
ಹರಿದು ಬಂತು ಜನಸಾಗರ: ಶಿಕ್ಷಣ ತಜ್ಞರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ಸಮಾಜದ ಎಲ್ಲಾ ವರ್ಗಗಳ ಭಕ್ತರು ವಿಶಾಲವಾದ ಶರಣಬಸವೇಶ್ವರ ದೇಗುಲ ಸಂಕೀರ್ಣಕ್ಕೆ ಹರಿದು ಬಂದರಲ್ಲದೆ ಡಾ. ಅಪ್ಪಾಜಿಯವರ ಪಾರ್ಥಿವ ಶರೀರಕ್ಕೆ ತಮ್ಮ ಅಂತಿಮ ನಮನ ಸಲ್ಲಿಸಿದರು. ದಾಸೋಹ ಮಹಾಮನೆಯ ಮುಖ್ಯ ದ್ವಾರದ ಮುಂದೆ ಅನೇಕ ಮಹಿಳೆಯರು ದುಃಖದಿಂದ ಗದ್ಗದಿತರಾಗಿ ಕಣ್ಣೀರಿಡುತ್ತಿದ್ದರು.ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಶ್ರೀ ಅಲ್ಲಮಪ್ರಭು ಪಾಟೀಲ್, ಡೆಪ್ಯೂಟಿ ಕಮಿಷನರ್ ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ, ರಾಜಕಾರಣಿಗಳು, ಉನ್ನತ ಅಧಿಕಾರಿಗಳು ದಾಸೋಹ ಮಹಾಮನೆಗೆ ಭೇಟಿ ನೀಡಿ ಡಾ. ಅಪ್ಪಾಜಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಮಡುಗಟ್ಟಿದ ಶೋಕ: ಡಾ. ಅಪ್ಪಾಜಿಯವರ ಪತ್ನಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಅವರೊಂದಿಗೆ ದಾಸೋಹ ಮಹಾಮನೆಯಲ್ಲಿ ಅಪ್ಪಾಜಿಯವರ ಮಕ್ಕಳು, ಚಿ. ದೊಡ್ಡಪ್ಪ ಅಪ್ಪ ಎಲ್ಲರು ಗದ್ಗಿತರಾಗಿರೋದು, ಬಾವುಕರಾಗಿ ಗುಂಪಾಗಿ ಕುಳಿತ ನೋಟಗಳು, ಬಂಧುಗಳು ಇವರನ್ನೆಲ್ಲ ಸಂತೈಸುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಕಂಡು ಬಂದವು, ಡಾ. ಅಪ್ಪಾಜಿಯವರ ಪ್ರೀತಿಯ ಮಗ, ಮಹಾದಾಸೋಹ ಪೀಠದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಮತ್ತು ಅವರ ಹೆಣ್ಣುಮಕ್ಕಳು ಶಿವಾನಿ, ಭವಾನಿ ಹಾಗೂ ಕೋಮಲ ಹಾಗೂ ಇತರ ಸಹೋದರಿ ಸಂಬಂಧಿಕರಲ್ಲಿ ದು:ಖ ಮಡುಗಟ್ಟಿತ್ತು.ಧಾರ್ಮಿಕ ಆಚರಣೆ ನೆರವೇರಿಸಿದ ಮಠಾಧೀಶರು
ಬೆಳಗುಂಪಿಯ ಬ್ರಹನ್ಮಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಮತ್ತು ಚೌಡೇಶ್ವರಿ ಮಠದ ಡಾ. ರಾಜಶೇಖರ ಶಿವಾಚಾರ್ಯರ ನೇತೃತ್ವದ ಸ್ವಾಮೀಜಿ ತಂಡವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟು, ಅಗಲಿದ 8ನೇ ಪೀಠಾಧಿಪತಿ ಡಾ. ಅಪ್ಪಾಜಿ ಅವರಿಂದ 9ನೇ ಪೀಠಾಧಿಪತಿಗಳಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರದ ಉಸ್ತುವಾರಿ ವಹಿಸಿದ್ದರು. ಈ ಮುಂಚೆಯೇ ಕೆಲವು ವರ್ಷಗಳ ಹಿಂದೆಯೇ ನಡೆದಂತಹ ಸಮಾರಂಭದಲ್ಲಿ ಡಾ. ಅಪ್ಪಾಜಿ ಅವರು 9 ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಪಟ್ಟಾಭಿಷೇಕದ ಸಮಯದಲ್ಲಿ ಹಿರಿಯ ಸ್ವಾಮೀಜಿ ಮತ್ತು ಮುಖಂಡರ ಸಮ್ಮುಖದಲ್ಲಿ ಸಂಸ್ಥಾನದ ಅಧಿಕಾರವನ್ನು ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರಿಗೆ ವರ್ಗಾಯಿಸಿದ್ದರು.ಅಪ್ಪಾಜಿಯವರ ಪಾರ್ಥೀವ ಶರೀರದ ದರ್ಶನ ಪಡೆಯಲು ಇಂದು ಮುಂಜಾನೆಯಿಂದಲೇ ಅನೇಕ ಭಕ್ತರು ವಿಶೇಷವಾಗಿ ಮಹಿಳೆಯರು ದೇಗುಲದ ಆವರಣದಲ್ಲಿ ಜಮಾಯಿಸಿದ್ದರು.
ದಾಸೋಹ ಮಹಾಮನೆಯ ಮುಖ್ಯ ದ್ವಾರದ ಬಲಭಾಗದ ಶಿವಾನುಭವ ಮಂಟಪಕ್ಕೆ ಕರೆತಂದು ಹೂವಿನಿಂದ ಅಲಂಕರಿಸಿದ ಆವರಣದಲ್ಲಿ ಕ್ರಮಬದ್ಧವಾಗಿ ಭಕ್ತರ ದರ್ಶನಕ್ಕಾಗಿ ಇರಿಸಲಾಯಿತು. ಡಾ. ಅಪ್ಪಾಜಿಯವರ ಪಾರ್ಥಿವ ಶರೀರವನ್ನು ಭಕ್ತರಿಗೆ ಕ್ರಮಬದ್ಧವಾಗಿ ಮತ್ತು ತೊಂದರೆ-ಮುಕ್ತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಡಾ. ಅಪ್ಪಾಜಿಯವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಅವರ ತಂದೆ ಮತ್ತು ಸಂಸ್ಥಾನದ 7ನೇ ಪೀಠಾಧಿಪತಿ ಲಿಂಗೈಕ್ಯ ದೊಡ್ಡಪ್ಪ ಅಪ್ಪಾಜಿಯವರ ಸಮಾಧಿಯ ಬಲಭಾಗದ ದೇವಾಲಯದ ಗರ್ಭಗುಡಿಯ ಎದುರಿನ ದೇವಾಲಯ ಸಂಕೀರ್ಣದಲ್ಲಿ ನೆರವೇರಿಸಲಾಯಿತು.