ಸಾರಾಂಶ
ಕೊಪ್ಪಳ: ₹10 ಮುಖಬೆಲೆಯ ನಾಣ್ಯವನ್ನು ಜನರು ಸ್ವೀಕಾರ ಮಾಡುತ್ತಿಲ್ಲ. ಇದು ಈಗ ಮಾರುಕಟ್ಟೆಯಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದು, ಅಲ್ಲಲ್ಲಿ ನಾಣ್ಯ ಸ್ವೀಕಾರ ಮಾಡದೇ ಇರುವ ಬಗ್ಗೆ ವಾಗ್ವಾದ ಆಗುತ್ತಲೇ ಇದೆ. ₹10 ನಾಣ್ಯಗಳನ್ನು ಯಾರೂ ಸ್ವೀಕರಿಸದೇ ಇರುವುದರಿಂದ ಅಂಗಡಿಯವರು ಗುಡ್ಡೆ ಹಾಕಿಕೊಳ್ಳುವಂತಾಗಿದೆ.₹10 ರುಪಾಯಿ ನಾಣ್ಯವನ್ನು ಬ್ಯಾನ್ ಮಾಡಿಲ್ಲ. ಮಾಡುವ ಕುರಿತು ಸರ್ಕಾರವಾಗಲಿ, ರಿಸರ್ವ್ ಬ್ಯಾಂಕಾಗಲಿ ಆದೇಶ ಅಥವಾ ಸುತ್ತೋಲೆ ಹೊರಡಿಸಿಲ್ಲ. ಆದರೂ ಈ ಕುರಿತು ವದಂತಿ ಭಾರಿ ಸದ್ದು ಮಾಡುತ್ತಿದೆ. ಕೊಡುವವರು ಕೊಟ್ಟು ಹೋಗುತ್ತಾರೆ. ಆದರೆ, ಸ್ವೀಕಾರ ಮಾಡಲು ಮಾತ್ರ ನಿರಾಕರಿಸುತ್ತಾರೆ ಎನ್ನುವುದು ಅಂಗಡಿಯವರ ಅಳಲು.ಕೊಪ್ಪಳ ನಗರದ ಮಾಲತೇಶ ಖಾನಾವಳಿಯಲ್ಲಿ ಹತ್ತು ರುಪಾಯಿ ನಾಣ್ಯಗಳು ಗುಡ್ಡೆಯಂತಾಗಿವೆ. ಯಾರು ಸ್ವೀಕರಿಸುತ್ತಿಲ್ಲ. ನಾವು ಸ್ವೀಕರಿಸಲು ಬರುವುದಿಲ್ಲ ಎನ್ನಲಾಗದು. ಹೀಗಾಗಿ, ಸ್ವೀಕಾರ ಮಾಡಿದ್ದ ನಾಣ್ಯಗಳು ಹೆಚ್ಚುತ್ತಲೇ ಹೋಗುತ್ತಿವೆ. ಇದರಿಂದ ನಮಗೆ ಸಾಕಾಗಿ ಹೋಗಿದೆ ಎನ್ನುತ್ತಾರೆ ಮಾಲೀಕ ಶಿವನಗೌಡ.ಕೇಸ್ ಮಾಡುತ್ತೇವೆ ಎಂದರೂ ಸ್ವೀಕರಿಸುವುದಿಲ್ಲ. ಮೊದಲು ನಮಗೆ ಬೇರೆ ನೋಟ್ ಕೊಡಿ, ನಂತರ ಕೇಸ್ ಮಾಡಿ ಎಂದು ದಬಾಯಿಸಿ ಹೋಗುತ್ತಾರೆಯೇ ಹೊರತು ಸ್ವೀಕರಿಸುವುದಿಲ್ಲ. ಬ್ಯಾನ್ ಮಾಡಿದ್ದಾರೆ ಎಂದು ಕೆಲವರು ಹೇಳಿದರು, ಇನ್ನು ಕೆಲವರು ಶೀಘ್ರದಲ್ಲಿಯೇ ಬ್ಯಾನ್ ಆಗುತ್ತವೆ ಎಂದು ಹೇಳಿ ಹೋಗುತ್ತಾರೆಯೇ ಹೊರತು 10 ರುಪಾಯಿ ನಾಣ್ಯವನ್ನು ಸ್ವೀಕರಿಸುವುದಿಲ್ಲ ಎನ್ನುತ್ತಾರೆ.ಇದು ಕೇವಲ ಅವರೊಬ್ಬರ ಕತೆಯಲ್ಲ, ಬಸ್ಸಿನಲ್ಲಿ ನಿರ್ವಾಹಕರು ಇದೇ ಸಮಸ್ಯೆ ಎದುರಿಸುತ್ತಾರೆ.ನಮಗಂತೂ ಸಾಕಾಗಿ ಹೋಗಿದೆ. ನಮಗೆ ಜೋರ್ ಮಾಡಿ ಕೊಟ್ಟು ಹೋಗುತ್ತಾರೆ. ಆದರೆ, ಯಾರು ಸಹ 10 ರುಪಾಯಿ ಕಾಯಿನ್ ಸ್ವೀಕಾರ ಮಾಡುತ್ತಿಲ್ಲ. ಕೇಸ್ ಮಾಡುತ್ತೇವೆ ಅಂತ ಹೇಳಿದ್ರೆ, ಆಮೇಲೆ ಕೇಸ್ ಮಾಡಿ, ಈಗ ನಮಗೆ ಬೇರೆ ನೋಟು ಕೊಡಿ ಎನ್ನುತ್ತಿದ್ದಾರೆ ಎನ್ನುತ್ತಾರೆ ಮಾಲತೇಶ ಖಾನಾವಳಿ ಮಾಲೀಕ ಶಿವನಗೌಡ.