ಜೀವ, ಆರೋಗ್ಯ ಹಾಗೂ ಪರಿಸರವನ್ನು ಉಳಿಸಿಕೊಳ್ಳಲು ಇಷ್ಟೊಂದು ದೀರ್ಘಕಾಲ ಹೋರಾಟ ನಡೆಸುವ ಅನಿವಾರ್ಯತೆ ಇದೆಯೇ?
ಬಲ್ಡೋಟ ಕಾರ್ಖಾನೆ ಮಾಲಿನ್ಯ ವಿರೋಧಿ ಧರಣಿ 354ನೇ ದಿನಕ್ಕೆ ಜನರ ಜೀವ, ಆರೋಗ್ಯ, ಪರಿಸರ ರಕ್ಷಣೆಗೆ ಹೋರಾಟ ತೀವ್ರಗೊಳಿಸುವ ಕರೆ
ಕನ್ನಡಪ್ರಭ ವಾರ್ತೆ ಕೊಪ್ಪಳಜೀವ, ಆರೋಗ್ಯ ಹಾಗೂ ಪರಿಸರವನ್ನು ಉಳಿಸಿಕೊಳ್ಳಲು ಇಷ್ಟೊಂದು ದೀರ್ಘಕಾಲ ಹೋರಾಟ ನಡೆಸುವ ಅನಿವಾರ್ಯತೆ ಇದೆಯೇ? ಎಂದು ‘ನಿರ್ಮಲ ತುಂಗಭದ್ರಾ ಆಂದೋಲನ’ದ ಸಂಚಾಲಕ, ಗಂಗಾವತಿ ನಿವಾಸಿ ಡಾ. ಶಿವಕುಮಾರ ಮಾಲಿಪಾಟೀಲ್ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರು.
ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ವತಿಯಿಂದ ಬಲ್ಡೋಟ ಕಾರ್ಖಾನೆ ಹಾಗೂ ಇತರ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಧರಣಿ 354ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು. ಕಾರ್ಖಾನೆಗಳಿಂದಾಗಿ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಭವಿಷ್ಯ ಆತಂಕದಲ್ಲಿದೆ. ಹಿರೇಬಗನಾಳ, ಕಾಸನಕಂಡಿ ಹಾಗೂ ಹಾಲವರ್ತಿ ಗ್ರಾಮಗಳಿಗೆ ಭೇಟಿ ನೀಡಿ, ರೋಗಬಾಧಿತರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಯುವಕರು, ಮಕ್ಕಳು ಸೇರಿದಂತೆ ಹಲವರು ದೃಷ್ಟಿ ಸಮಸ್ಯೆ, ತೀವ್ರ ಚರ್ಮದ ಅಲರ್ಜಿ ಹಾಗೂ ಉಸಿರಾಟದ ತೊಂದರೆ ಅನುಭವಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು.ತುಂಗಭದ್ರಾ ನದಿ ನೀರಿನ ಮಾಲಿನ್ಯಕ್ಕೂ ಕಾರ್ಖಾನೆಗಳೇ ಪ್ರಮುಖ ಕಾರಣ ಎಂದು ಆರೋಪಿಸಿದ ಅವರು, ಪರಿಸರ ಸಂರಕ್ಷಣೆಯ ಈ ಹೋರಾಟಕ್ಕೆ ನಿರ್ಮಲ ತುಂಗಭದ್ರಾ ಆಂದೋಲನ ಸಂಪೂರ್ಣ ಬೆಂಬಲ ನೀಡಲಿದೆ. ಅ. 31ರಿಂದ 48 ಗಂಟೆಗಳ ಕಾಲ ನಡೆಯಲಿರುವ ಕೊಪ್ಪಳ-ಭಾಗ್ಯನಗರ ಬಂದ್ಗೆ ಜಿಲ್ಲೆಯ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜನರನ್ನು ಒಕ್ಕಲೆಬ್ಬಿಸುವುದು ಯಾವ ನ್ಯಾಯ?:ಸಾಹಿತಿ ಶರಣಪ್ಪ ಮೆಟ್ರಿ ಮಾತನಾಡಿ, ಪ್ರಕೃತಿ ನೀಡಿರುವ ಪರಿಸರ, ಶುದ್ಧ ನೀರು ಮತ್ತು ಶುದ್ಧ ಗಾಳಿಯನ್ನು ಹಾಳುಮಾಡಲು ಯಾರಿಗೂ ಅಧಿಕಾರವಿಲ್ಲ. ಆದರೆ, ಬಂಡವಾಳಗಾರರನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರದ ತಪ್ಪು ನೀತಿಗಳ ಪರಿಣಾಮವಾಗಿ ಸ್ಥಳೀಯ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಜನರನ್ನು ಅವರ ನೆಲದಿಂದ ಒಕ್ಕಲೆಬ್ಬಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬಲ್ಡೋಟ ಕಾರ್ಖಾನೆ ಇಲ್ಲಿಂದ ತೆರಳಿದರೆ ಲಕ್ಷಾಂತರ ಜನರ ಬದುಕಿಗೆ ನೆಮ್ಮದಿ ಸಿಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಹೋರಾಟಕ್ಕೆ ಸಾಹಿತ್ಯ ವಲಯದ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ಅ. 31ರಂದು ನಡೆಯುವ ಬಂದ್ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಧರಣಿಯಲ್ಲಿ ಭಾಗಿ:
ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಶರಣಬಸಪ್ಪ ದಾನಕೈ, ಡಾ. ಪಿ. ಗೀತಾ, ಡಾ. ಯು. ವೀರೇಶ, ಡಾ. ಬಿ. ರವೀಂದ್ರ, ಶಿವಪ್ಪ ಬನಪ್ಪನವರ, ಚಿದಾನಂದ ಕೀರ್ತಿ, ದೇವೇಂದ್ರಪ್ಪ ಪೂಜಾರ, ಮಲ್ಲಪ್ಪ ಎಸ್. ಮಾದಿನೂರು ಪಾಲ್ಗೊಂಡಿದ್ದರು.