ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಜನರ ಆಕ್ರೋಶ

| Published : Feb 19 2024, 01:30 AM IST

ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಜನರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿ ನೀಡಿದ ರೈತರಿಗೆ ಕಾಯಂ ನೌಕರಿ ನೀಡದೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದೆ ಎಂದು ಆರೊಪಿಸಿ ಸಮಸ್ಯೆಗೆ ಸ್ಪಂಧಿಸಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ಗೆ ಸಾರ್ವನಿಕರು, ರೈತರು ಒತ್ತಾಯಿಸಿದರು

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

೨೦೧೫ರಲ್ಲಿ ತಾಲೂಕಿನ ಇಟಗಾ ಗ್ರಾಮದ ಹೊರವಲಯದಲ್ಲಿ ಸ್ಥಾಪನೆಯಾಗಿರುವ ಓರಿಯಂಟ್ ಸಿಮೆಂಟ್ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಇಟಗಾ, ಮೊಗಲಾ, ದಿಗ್ಗಾಂವ, ಚಿತ್ತಾಪುರ ಗ್ರಾಮಗಳಿಗೆ ಕಂಪನಿ ಆಡಳಿತ ಭೂಮಿ ನೀಡಿದ ರೈತರಿಗೆ ಹಾಗೂ ಗ್ರಾಮಗಳಿಗೆ ಜಮೀನು ಖರೀದಿ ವೇಳೆ ನೀಡಿದ ಒಪ್ಪಂದದಂತೆ ನಡೆದುಕೊಳ್ಳದೆ ಮೋಸ ಮಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಎರಡನೇ ಘಟಕ ಸ್ಥಾಪನೆ ಕುರಿತಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅಧ್ಯಕ್ಷತೆಯಲ್ಲಿ ನಡೆದ ಆಲಿಕೆ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಂಪನಿ ಸ್ಥಾಪನೆ ವೇಳೆ ೪೮೬ ಸರ್ವೆ ನಂಬರ್‌ಗಳನ್ನು ಖರೀದಿ ಮಾಡಿದ್ದರು. ಅಲ್ಲದೇ ಜಮೀನು ಖರೀದಿ ವೇಳೆಯು ರೈತರಲ್ಲಿ ತಾರತಮ್ಯ ನೀತಿ ಅನುಸರಿಸಿ ಕೆಲವರಿಗೆ ಹೆಚ್ಚಿನ ದರ ನೀಡಿ ಖರೀದಿ ಮಾಡಿದ್ದಾರೆ. ಅಲ್ಲದೇ ಜಮೀನು ನೀಡಿದ ರೈತರಿಗೆ ಕಾಯಂ ನೌಕರಿ ನೀಡದೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದೆ.

ಈಗ ನಮಗೆ ಉಳಿದ ಅಲ್ಪ ಸ್ವಲ್ಪ ಹೊಲದಲ್ಲಿ ಕಂಪನಿಯಿಂದ ಬರುವ ತ್ಯಾಜ್ಯ ಹೊಗೆಯಿಂದ ಬೆಳೆ ಬೆಳೆಯದಂತಹ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ತಮ್ಮ ಅಳಲನ್ನು ಜಿಲ್ಲಾಧಿಕಾರಿ ಮುಂದೆ ವ್ಯಕ್ತಪಡಿಸಿದರು.

ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಣ್ಣ ಸಾಲಿ, ಮುಕ್ತಾರ ಅಹ್ಮದ ಪಟೇಲ್, ತಮ್ಮಣ್ಣ ಡಿಗ್ಗಿ, ರೈತರಾದ ಮಲ್ಲಿಕಾರ್ಜುನ ಪಾಟೀಲ್, ಜಗದೀಶ ಚವ್ವಾಣ, ದೇವಿದಾಸ, ಕಿರಣ ನಾಯಕ, ಅಯ್ಯಪ್ಪ, ಶ್ರೀಮಂತ ಗುತ್ತೆದಾರ, ದೇವಿಂದ್ರಪ್ಪ ಬೊಮ್ಮನಹಳ್ಳಿ, ಶರಣಬಸಪ್ಪ ಸೂಗೂರ, ತಿಪ್ಪಣ್ಣ ದೊಡ್ಮನಿ, ಎಚ್.ಎಸ್ ಯಾದವ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಎಲ್ಲರ ಅಭಿಪ್ರಾಯವನ್ನು ಹಾಗೂ ಲಿಖಿತ ರೂಪದಲ್ಲಿ ಬಂದಿರುವ ದೂರು ಪರಿಶೀಲನೆ ಮಾಡಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

ಸೇಡಂ ಸಹಾಯಕ ಆಯುಕ್ತ ಆಶಪ್ಪ ಪ್ರಜಾರಿ, ಪರಿಸರ ಇಲಾಖೆ ಅಧಿಕಾರಿ ಸಿ.ಎನ್. ಮಂಜಪ್ಪ, ಕೈಗಾರಿಕೆ ಇಲಾಖೆ ಅಧಿಕಾರಿ ಸತೀಶಕುಮಾರ, ತಹಸೀಲ್ದಾರ ಸೈಯದ ಷಾಷವಲ್ಲಿ, ಇಓ ನೀಲಗಂಗಾ ಇದ್ದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ, ಚಿತ್ತಾಪುರ, ಮಾಡಬೂಳ, ವಾಡಿ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಬಂದೊಬಸ್ತ ವ್ಯವಸ್ಥೆ ಮಾಡಿದ್ದರು.ಓರಿಯಂಟ್ ಸಿಮೆಂಟ್ ಕಂಪನಿಯು ತಾಲೂಕಿನಲ್ಲಿ ಸ್ಥಾಪನೆಯಾಗಿರುವುದರಿಂದ ಯುವಕರಿಗೆ, ವ್ಯಾಪರಸ್ಥರಿಗೆ ಕಂಪನಿ ವ್ಯಾಪ್ತಿಯ ಗ್ರಾಮಗಳು ಹಾಗೂ ಚಿತ್ತಾಪುರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇಲ್ಲಿ ಎರಡನೇ ಘಟನೆ ಸ್ಥಾಪನೆಯಾದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಭೀಮಸಿಂಗ್ ಚವ್ವಾಣ, ರೈತ, ಚಿತ್ತಾಪುರ.

ರೈತರ ಜಮೀನು ಖರೀದಿ ಸಮಯದಲ್ಲಿ ಅನ್ಯಾಯವಾಗಿದೆ. ಅಲ್ಲದೇ ಕೆಲಸದಿಂದ ತೆಗೆದ ೧೩ ಜನರಿಗೆ ನೌಕರಿ ಸೇರಿದಂತೆ ಅನೇಕ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಒಂದೂವರೆ ವರ್ಷದಿಂದ ರೈತರು ಅಹೊರಾತ್ರಿ ಧರಣಿ ಮಾಡುತ್ತಿದ್ದಾರೆ. ಅವರ ಬೇಡಿಕೆಗೆ ಯಾರು ಸ್ಪಂದಿಸುತ್ತಿಲ್ಲ. ಈಗ ಎರಡನೇ ಘಟಕ ಸ್ಥಾಪನೆಗೂ ಮುನ್ನಾ ಮೊದಲು ಜಮೀನು ನೀಡಿದ ರೈತರ ಬೇಡಿಕೆ ಈಡೇರಿಸಿ ಅವರಿಗೆ ನ್ಯಾಯ ಒದಗಿಸಬೇಕು.

ಸಾಯಬಣ್ಣ ಗುಡೂಬಾ. ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ.