ತಾಪಮಾನ ತೀವ್ರ ಏರಿಕೆಗೆ ಜನ ಕಂಗಾಲು

| Published : Apr 30 2024, 02:01 AM IST

ಸಾರಾಂಶ

ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ 36 ಡಿಗ್ರಿಯಿಂದ 39 ಡಿಗ್ರಿ ವರೆಗೆ ತಾಪಮಾನ ನಿತ್ಯ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು, ವಯಸ್ಕರು ಮತ್ತು ವೃದ್ಧರು ಎಲ್ಲರನ್ನು ಬಿಸಿಲ ಬೇಗೆ ತಟ್ಟುತ್ತಿದ್ದ, ಆರೋಗ್ಯದ ಕುರಿತು ಎಚ್ಚರದಿಂದ ಇರುವುದು ಒಳಿತು.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಹವಾಮಾನ ವೈಪರೀತ್ಯದ ಪರಿಣಾಮ ಉಷ್ಣ ಅಲೆಗಳಿಂದ ಬಿಸಿಲ ಬೇಗೆ ಹೆಚ್ಚಿದೆ. ಇದು ಜನರನ್ನು ಹೈರಾಣವಾಗಿಸಿದೆ.ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ ಕಳೆದ ಒಂದು ವಾರಗಳಿಂದ 36 ಡಿಗ್ರಿಯಿಂದ 39 ಡಿಗ್ರಿ ವರೆಗೆ ತಾಪಮಾನ ನಿತ್ಯ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು, ವಯಸ್ಕರು ಮತ್ತು ವೃದ್ಧರು ಎಲ್ಲರನ್ನು ಬಿಸಿಲ ಬೇಗೆ ತಟ್ಟುತ್ತಿದ್ದ, ಆರೋಗ್ಯದ ಕುರಿತು ಎಚ್ಚರದಿಂದ ಇರುವುದು ಒಳಿತು.* 40 ಡಿಗ್ರಿ ಉಷ್ಣತೆ ಏರಿಕೆ ಸಾಧ್ಯತೆ:

ಪಶ್ಚಿಮ ಘಟ್ಟಗಳ ತಪ್ಪಲಿನ ತಾಲೂಕುಗಳಾದ ಕಾರ್ಕಳ ಹಾಗೂ ಹೆಬ್ರಿಯಲ್ಲಿ ಮುಂದಿನ‌ ದಿನಗಳಲ್ಲಿ ಉಷ್ಣತೆಯು 37 ಡಿಗ್ರಿಯಿಂದ 42 ಡಿಗ್ರಿ‌ಗೆ ಏರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಜನರು ಚಹಾ, ಕಾಫಿ, ತಂಪು ಪಾನೀಯಗಳು, ಮಸಾಲ ಪದಾರ್ಥಗಳನ್ನು ಆದಷ್ಟು ತ್ಯಜಿಸುವುದು ಒಳಿತು ಎಂದು ಹವಾಮಾನ ಇಲಾಖೆ ಹೇಳಿದೆ.

* ಆರೋಗ್ಯ ಕಾಪಾಡಿಕೊಳ್ಳಿ

ತಾಪಮಾನದ ವೈಪರೀತ್ಯಗಳು ಹೃದಯ ರಕ್ತನಾಳದ ಕಾಯಿಲೆ, ಉಸಿರಾಟದ ಕಾಯಿಲೆ ಮತ್ತು ಮಧುಮೇಹ ಸಂಬಂಧಿತ ಪರಿಸ್ಥಿತಿಗಳಂತಹ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳನ್ನು ಇನ್ನಷ್ಟು ಹದಗೆಡಿಸಬಹುದು. ನಿರ್ಜಲೀಕರಣ, ಬಿಸಿಲಿನ ಹೊಡೆತ, ಪಾರ್ಶ್ವವಾಯು, ಮೂತ್ರಪಿಂಡದ ತೊಂದರೆಗಳು ಮತ್ತು ಚರ್ಮದ ಸೋಂಕುಗಳು ಉಂಟಾಗಬಹುದು.

* ಹೇಗೆ ರಕ್ಷಿಸಿಕೊಳ್ಳಬಹುದು

ಬಾಯಾರಿಕೆಯಾದರೆ ಅತಿಯಾಗಿ ನೀರು ಕುಡಿಯಬೇಕು. ಶುದ್ಧವಾದ ನೀರು, ಎಳನೀರು, ಅಕ್ಕಿ ಗಂಜಿ ಮತ್ತಿತರ ಆರೋಗ್ಯಕ್ಕೆ ಹಿತವಾದ ಪಾನೀಯಗಳನ್ನು ಸೇವನೆ, ಹಣ್ಣುಗಳ ಸೇವನೆ ಉತ್ತಮ. ಮಡಕೆಯಲ್ಲಿ ಸಂಗ್ರಹಿಸಿರುವ ತಣ್ಣನೆಯ ನೀರು ಕುಡಿದರೆ ಒಳ್ಲೆಯದು. ಮಾಂಸಾಹಾರ, ಮಸಾಲೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ, ಅತಿಯಾಗಿ ಫ್ರಿಜ್ಜಿನಲ್ಲಿಟ್ಟ ತಣ್ಣನೆಯ ನೀರನ್ನು ಕುಡಿಯಬಾರದು.

* ದ್ವಿಚಕ್ರ ಸವಾರರೆ ಹುಷಾರ್:

ಬಿಸಿಲಿನಲ್ಲಿ ಸಾಗುವ ಸಮಯದಲ್ಲಿ ನಿರ್ಜಲೀಕರಣವಾಗುವುದು ಸಹಜ. ಈ ಹೊತ್ತಿನಲ್ಲಿ ನಿರ್ಜಲೀಕರಣದಿಂದ ನಿದ್ದೆಗೆ ಜಾರುವ ಸನ್ನಿವೇಶಗಳು ಉಂಟಾಗಿ ಅಪಘಾತಗಳು ಸಂಭವಿಸಬಹುದು. ಆದಷ್ಟು ಬಿಸಿಲಿನಲ್ಲಿ ಸಂಚರಿಸುವುದನ್ನು ತಪ್ಪಿಸಿ. ಆರೋಗ್ಯ ಕಾಪಾಡಿಕೊಳ್ಳಿ. ಬಸ್‌ನಲ್ಲಿ ಹೆಚ್ಚಾಗಿ ಸಂಚರಿಸಿ‌ ಎಂದು ಸಲಹೆ ನೀಡುತ್ತಾರೆ ಡಾ. ಶಶಿಕಲಾ.* ಜಾನುವಾರು ಸುರಕ್ಷತೆ ಕೂಡ ಮುಖ್ಯ

ಮನೆಯಲ್ಲಿ ಸಾಕುವ ನಾಯಿ, ದನಗಳು ಹಾಗೂ ಪಂಜರದಲ್ಲಿ ಸಾಕಿರುವ ಪಕ್ಷಿಗಳ ಆರೋಗ್ಯವೂ ಮುಖ್ಯ. ದಿನವೂ ಕಾಲಕಾಲಕ್ಕೆ ನೀರು, ಆಹಾರ ಮತ್ತು ಮೇವು ಕೊಡುತ್ತಿರಬೇಕು. ಬೇಸಿಗೆಯಲ್ಲಿ ನಮ್ಮಂತೆಯೇ ಪ್ರಾಣಿಗಳಿಗೂ ಕೂಡ ಜಾಸ್ತಿ ನೀರು ಬೇಕಾಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

.................

ಉಷ್ಣ ಅಲೆಗಳಿಂದ ತಪ್ಪಿಸಿಕೊಳ್ಳಲು ತಂಪಾದ ಪ್ರದೇಶದಲ್ಲಿ ನಿಲ್ಲಬೇಕು. ನೀರಿನ‌ ಸೇವನೆ ಮುಖ್ಯವಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಉಷ್ಣ ಅಲೆಯ ಮುನ್ನೆಚ್ಚರಿಕೆ ಆದೇಶ ಹೊರಡಿಸಿದೆ. ಆರೋಗ್ಯದಲ್ಲಿ ಏರುಪೇರಾದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಡಾಕ್ಟರ್ ಸಲಹೆ ಸೂಚನೆಗಳನ್ನು ಪಾಲಿಸಿ.

। ಡಾ. ಶಶಿಕಲಾ, ಆಡಳಿತ ಅಧಿಕಾರಿ, ತಾಲೂಕು ಸರ್ಕಾರಿ ಆಸ್ಪತ್ರೆ ಕಾರ್ಕಳ.