ವಿದ್ಯುತ್‌ ಇಲ್ಲದೇ ಒಂದೂವರೆ ತಿಂಗಳಿನಿಂದ ಕುಡಿಯಲು ನೀರಿಲ್ಲ

| Published : Nov 26 2023, 01:15 AM IST

ವಿದ್ಯುತ್‌ ಇಲ್ಲದೇ ಒಂದೂವರೆ ತಿಂಗಳಿನಿಂದ ಕುಡಿಯಲು ನೀರಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇಲ್ಲಿನ ಲೈನ್‌ಮ್ಯಾನ್ ಹಣ ನೀಡಿದರೆ ಮಾತ್ರ ಕಂಬ ಹತ್ತುವೆ ಎಂದು ಉಡಾಫೆಯಿಂದ ವರ್ತಿಸುತ್ತಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ದೊಡ್ಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ದೊಡ್ಡಿಹಳ್ಳಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ದೊಡ್ಡಿಹಳ್ಳಿ ಗ್ರಾಮದಲ್ಲಿ ಕಳೆದ ಒಂದುವರೆ ತಿಂಗಳಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜವಾಗುತ್ತಿಲ್ಲ.

ಇಲ್ಲಿನ ಲೈನ್‌ಮ್ಯಾನ್ ಹಣ ನೀಡಿದರೆ ಮಾತ್ರ ಕಂಬ ಹತ್ತುವೆ ಎಂದು ಉಡಾಫೆಯಿಂದ ವರ್ತಿಸುತ್ತಿದ್ದು, ಅವರನ್ನು ಅಮಾನತು ಮಾಡಬೇಕು ಎಂದು ದೊಡ್ಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ದೊಡ್ಡಿಹಳ್ಳಿ ಗ್ರಾಮದ ಯಶೋಧರ್, ಧರ್ಮಣ್ಣ ಮತ್ತು ಪ್ರವೀಣ್, ದೊಡ್ಡಿಹಳ್ಳಿ ಗ್ರಾಮ ತಾಲೂಕಿನ ಕಟ್ಟಕಡೆಯ ಗ್ರಾಮವಾಗಿದ್ದು ಮೂಲಭೂತ ಸೌಲಭ್ಯದಿಂದ ಹಿಂದುಳಿದೆ. ಕಳೆದ ಒಂದುವರೆ ತಿಂಗಳಿಂದ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಮೈಲಿಗಟ್ಟಲೆ ನೀರನ್ನು ಹೊತ್ತು ತರಬೇಕಾದ ಹೀನ ಸ್ಥಿತಿ ಬಂದಿದೆ. ನೀರು ಇಲ್ಲದೆ ಶೌಚಾಲಯ ಬಳಕೆ ಇಲ್ಲದೆ ಬಯಲಿಗೆ ತೆರಳುತ್ತಿದ್ದಾರೆ. ನೀರಿನ ಅಭಾವದಿಂದ ಹೈನುಗಾರಿಕೆ ಸಂಕಷ್ಟದ ಸ್ಥಿತಿಯನ್ನು ತಲುಪಿದೆ. ಇನ್ನು ಬೇಸಿಗೆ ಆರಂಭದ ಮುನ್ನವೇ ಕರೆಂಟ್ ಇಲ್ಲದೆ ಹಿಂಗಾರು ಬೆಳೆಗಳು ಸಂಪೂರ್ಣ ಸರ್ವನಾಶವಾಗಿದೆ. ಗ್ರಾಮದಲ್ಲಿ ಕರೆಂಟ್ ಇಲ್ಲ ಶೀಘ್ರವೇ ಸರಿಪಡಿಸಿ ಎಂದು ಸಂಬಂಧಪಟ್ಟ ಚೆಸ್ಕಾಂ ಇಲಾಖೆಗೆ ತಿಳಿಸಿದರೂ ಯಾವ ಪ್ರಯೋಜವಾಗಿಲ್ಲ ಎಂದು ತಮ್ಮ ಅಳಲನ್ನು ಹೇಳಿಕೊಂಡರು.

ದೊಡ್ಡಿಹಳ್ಳಿ ಗ್ರಾಮಕ್ಕೆ ಬರುವ ಲೈನ್‌ಮ್ಯಾನ್ ಜಗದೀಶ್ ಕಳೆದ ೧೫ ವರ್ಷದಿಂದ ಇಲ್ಲಿಯೇ ಠಿಕಾಣಿ ಹಾಕಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜಾರೋಷವಾಗಿಯೇ ಜನರ ಬಳಿ ಹಣ (ಲಂಚ) ಕೇಳುತ್ತಾರೆ ಮತ್ತು ಉಡಾಫೆಯಿಂದ ವರ್ತಿಸುತ್ತಾರೆ. ದೊಡ್ಡಿಹಳ್ಳಿ ಗ್ರಾಮಸ್ಥರು ಕೂಡ ಕೇಳಿದ ಸಂದರ್ಭದಲ್ಲಿ ಹಣ ನೀಡಿದರೆ ಮಾತ್ರ ಕಂಬ ಹತ್ತುವೆ. ಇಲ್ಲವಾದರೆ ನಿಮ್ಮ ಅಪ್ಪಂದಿರು ಕೊಡುತ್ತಾರಾ? ಹಣ ಎಂದು ಬೈಯುತ್ತಾರೆ.

ಈ ಬಗ್ಗೆ ಸ್ವತಃ ಜೆಇ ಅವರಿಗೆ ತಿಳಿಸಿದರೆ ನಮ್ಮ ಮಾತನ್ನೇ ಲೈನ್‌ಮ್ಯಾನ್ ಜಗದೀಶ ಕೇಳುತ್ತಿಲ್ಲ ಎಂದು ಉನ್ನತ ಅಧಿಕಾರಿಗಳೇ ಕೈಚೆಲ್ಲಿ ಕುಳಿತಿದ್ದಾರೆ.

ಗ್ರಾಮಸ್ಥರೆಲ್ಲಾ ಒಟ್ಟುಗೂಡಿಸಿ ೫೦೦ ರು.ಗಳನ್ನು ನೀಡಿದರೆ, ಸಾಕಾಗುವುದಿಲ್ಲಾ ನನಗೆ ೨೦೦೦ ಸಾವಿರ ಬೇಕು, ಎಲ್ಲಾ ಹಿರಿಯ ಅಧಿಕಾರಿಗಳಿಗೂ ನಾನು ಕೊಡಬೇಕು ಎಂದು ರಾಜಾರೋಷವಾಗಿ ಹಣದ ಬೇಡಿಕೆ ಇಡುತ್ತಾ ರೈತರಿಗೆ ತೊಂದರೆ ನೀಡುತ್ತಿರುವ ಲೈನ್‌ಮ್ಯಾನ್ ಜಗದೀಶ್ ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಪಡಿಸಬೇಕು. ಇಲ್ಲವೇ ಈ ವೃತ್ತದಿಂದ ವರ್ಗಾವಣೆಗೊಳಿಸಬೇಕು ಎಂದರು.

ಕೂಡಲೆ ಅಧಿಕಾರಿಗಳು ಇತ್ತ ಗಮನಹರಿಸದಿದ್ದಲ್ಲಿ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದ ಗ್ರಾಮಸ್ಥರು ಆದಷ್ಟು ಬೇಗ ಗ್ರಾಮಕ್ಕೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದೊಡ್ಡಿಹಳ್ಳಿ ಗ್ರಾಮಸ್ಥರಾದ ಅನಿಲ್‌ ಕುಮಾರ್, ಲೋಕೇಶ್, ಹರ್ಷ, ಅಜಿತ್, ತಿರ್ಥಮಲ್ಲಯ್ಯ, ಶಿವಕುಮಾರ್, ದಿವಾಕರ್, ಹಾಲಪ್ಪ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.