ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡ ಗುಡುಗು- ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಹಾ ಮಳೆಗೆ ಜನತೆ ತತ್ತರಿಸುವಂತಾಯಿತು. 20ಕ್ಕೂ ಅಧಿಕ ಕಡೆ ಮರಗಳು ನೆಲಕ್ಕುರುಳಿದರೆ, ತಗ್ಗುಪ್ರದೇಶಗಳಲ್ಲಿ ನೀರು ನಿಂತು ಜನತೆ ತೊಂದರೆ ಅನುಭವಿಸುವಂತಾಯಿತು.
ಬೆಳಗ್ಗೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನದಿಂದಾಗಿ ಜನರು ಬಳಲುವಂತಾಯಿತು. ಮಧ್ಯಾಹ್ನ 3 ಗಂಟೆಗೆ ಮೋಡ ಕವಿದ ವಾತಾವರಣ ಹಾಗೂ ಗುಡುಗು- ಸಿಡಿಲಿನ ಆರಂಭಟದೊಂದಿಗೆ ಕೊಂಚ ಮಳೆ ಸುರಿಯಲು ಆರಂಭಿಸಿತು. ಈ ವೇಳೆ ಕೊಂಚ ಬಿಡುವು ನೀಡಿದ ವರುಣನು ಸಂಜೆಯ ವೇಳೆಗೆ ಅರ್ಧ ಗಂಟೆಗೂ ಹೆಚ್ಚುಕಾಲ ರಭಸದ ಮಳೆ ಸುರಿಯಿತು. ನಿತ್ಯ 7 ಗಂಟೆಯ ಬಳಿಕ ನಗರದಲ್ಲಿ ಕತ್ತಲೆ ಆವರಿಸುತ್ತದೆ. ಆದರೆ, ಭಾನುವಾರ 5.30 ಗಂಟೆಗೆ ದಟ್ಟ ಮೋಡಗಳಿಂದಾಗಿ ನಗರವಿಡೀ ಕತ್ತಲಿನಿಂದ ಆವರಿಸಿರುವುದು ಕಂಡು ಬಂದಿತು. ರಭಸದ ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ನಿಂತು ಜನರು ತೊಂದರೆ ಅನುಭವಿಸುವಂತಾಯಿತು.ಧರೆಗುರುಳಿದ ಮರಗಳು
ಮಳೆಯೊಂದಿಗೆ ಬೀಸಿದ ರಭಸದ ಗಾಳಿಗೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಇಲ್ಲಿನ ಶಿವಪುತ್ರ ನಗರದಲ್ಲಿರುವ ಮೆಹಬೂಬ ಸುಬಾನಿ ದರ್ಗಾದ ಮೇಲೆ 100 ವರ್ಷಕ್ಕೂ ಹಳೆಯದಾದ ಬೃಹತ್ ಮರ ಬಿದ್ದು ದರ್ಗಾ ಹಾಗೂ ಅಕ್ಕಪಕ್ಕದ ಮನೆಗಳು, ವಾಹನಗಳಿಗೆ ಹಾನಿಯನ್ನುಂಟು ಮಾಡಿದೆ. ಸಿದ್ದೇಶ್ವರ ಪಾರ್ಕಿನ ಭಾರತಿ ಕಾಲನಿಯಲ್ಲಿ ವಿದ್ಯಾತ್ ಕಂಬದ ಮೇಲೆ ಮರಬಿದ್ದು ಅಪಾರ ಹಾನಿಯಾಗಿದೆ. ಆನಂದ ನಗರದ ಸಂಗಮ ಕಾಲನಿಯ ಮುಖ್ಯರಸ್ತೆಯ ಮೇಲೆ ಬೃಹತ್ ಮರಬಿದ್ದು ಸಂಚಾರಕ್ಕೆ ತೊಂದರೆಯಾಯಿತು. ಜತೆಗೆ ಮಂಜುನಾಥ ನಗರ, ಸನ್ಮಾನ ಕಾಲನಿ, ಪ್ರಿಯದರ್ಶಿನಿ ಕಾಲನಿ, ಸುರಭಿ ನಗರ, ನವನಗರ, ಅಧ್ಯಾಪಕ ನಗರ, ಶಿರೂರ ಪಾರ್ಕ, ಕಾಳಿದಾಸ ನಗರ, ಭಾಗ್ಯಲಕ್ಷ್ಮೀ ನಗರ, ಬಾಪೂಜಿ ಕಾಲನಿ, ತಿಮ್ಮಸಾಗರ ರಸ್ತೆ ಸೇರಿದಂತೆ ಹಲವು ಕಡೆ ಮರಗಳು ನೆಲಕ್ಕುರುಳಿರುವುದು ಕಂಡುಬಂದಿತು.ಆನಂದನಗರ ರಸ್ತೆಯ ಗಣೇಶ ನಗರ, ಪಡದಯ್ಯನ ಹಕ್ಕಲ, ದಾಜಿಬಾನ ಪೇಟೆ, ಮಹಾವೀರ ಗಲ್ಲಿ, ಕೋಯಿನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರ ಚೆನ್ನಮ್ಮ ವೃತ್ತ, ಹಳೇಹುಬ್ಬಳ್ಳಿ, ಆನಂದನಗರ, ಬಾಣಂತಿ ಕಟ್ಟಿ, ಆರ್.ಎನ್. ಶೆಟ್ಟಿ ರಸ್ತೆ, ನೇಕಾರನಗರ, ಉಣಕಲ್ಲ ಕ್ರಾಸ್, ಶ್ರೀನಗರ ಕ್ರಾಸ್ ಸೇರಿದಂತೆ ಹಲವು ಕಡೆ ಅಪಾರ ಪ್ರಮಾಣದ ನೀರು ನಿಂತಿರುವ ಕುರಿತು ವರದಿಯಾಗಿದೆ. ಇದಲ್ಲದೇ ನಗರದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿರುವ ಕುರಿತು ಸಹ ವರದಿಯಾಗಿದೆ.
ಸದಾ ಗಿಜಿಗುಡುತ್ತಿದ್ದ ದುರ್ಗದಬೈಲ್, ದಾಜಿಬಾನ್‌ಪೇಟೆ, ಜನತಾ ಬಜಾರ್, ಗಾಂಧಿ ಮಾರ್ಕೆಟ್‌ನಲ್ಲಿ ಧಾರಾಕಾರ ಮಳೆಯಿಂದಾಗಿ ಜನರ ಸಂಖ್ಯೆ ವಿರಳವಾಗಿತ್ತು. ವ್ಯಾಪಾರವಿಲ್ಲದೇ ವ್ಯಾಪಾರಸ್ಥರು ಸಂಜೆಯೇ ಅಂಗಡಿ- ಮುಂಗಟ್ಟು ಬಂದ್ ಮಾಡಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇನ್ನು ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲೂ ಅಪಾರ ಪ್ರಮಾಣದ ಮಳೆಯಾಗಿರುವ ಕುರಿತು ವರದಿಯಾಗಿದ್ದು, ಗ್ರಾಮೀಣ ಭಾಗದ ಕೆಲವು ಕಡೆ ಶೆಡ್‌ಗಳ ಮೇಲೆ ಹಾಕಿರುವ ತಗಡುಗಳು ಹಾರಿ ಹೋಗಿರುವ ಕುರಿತು ವರದಿಯಾಗಿವೆ.ಧಾರವಾಡದಲ್ಲಿ ಉತ್ತಮ ಮಳೆ
ಧಾರವಾಡ: ಬಿರು ಬಿಸಿಲಿಗೆ ಎರಡ್ಮೂರು ದಿನಗಳಿಂದ ನಲುಗಿದ್ದ ಧಾರವಾಡ ಜನತೆಗೆ ಭಾನುವಾರ ಸುರಿದ ಉತ್ತಮ ಮಳೆಯು ಆಹ್ಲಾದಕರ ವಾತಾವರಣ ತಂದುಕೊಟ್ಟಿದೆ. ಬೆಳಗ್ಗೆಯಿಂದ ವಿಪರೀತ ಬಿಸಿಲು, ಸೆಕೆಯಿಂದ ಕೂಡಿದ್ದ ವಾತಾವರಣ ಸಂಜೆ ಹೊತ್ತಿಗೆ ಬದಲಾಯಿತು. ಮೋಡ ಮುಸುಕಿ ಗಾಳಿ, ಸಿಡಿಲು ಗುಡುಗಿನೊಂದಿಗೆ ಸುಮಾರು ಅರ್ಧ ಗಂಟೆ ಕಾಲ ಉತ್ತಮ ಮಳೆ ಸುರಿಯಿತು. ದುರಾದೃಷ್ಟವಶಾತ್ ಮಳೆ ಬರುವ ಮುಂಚೆಯೇ ಬಿದ್ದ ಒಣಸಿಡಿಲಿನಿಂದ ಸಮೀಪದ ಕವಲಗೇರಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಶಿರಸಂಗಿ (29) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪತಿ ಹನುಮಂತಪ್ಪನಿಗೆ ಗಾಯಗಳಾಗಿವೆ.ಇನ್ನು, ಮಳೆ ಹಾಗೂ ಗಾಳಿಯಿಂದಾಗಿ ನಗರದ ವಿವೇಕಾನಂದ ವೃತ್ತ ಹಾಗೂ ಇತರೆಡೆ ಮರೆಗಳು ಧರೆಗೆ ಉರುಳಿವೆ. ಹಾಗೆಯೇ, ಬಿಆರ್‌ಟಿಎಸ್ ರಸ್ತೆಯಲ್ಲಿ ಎಂದಿನಂತೆ ನಾಲ್ಕೈದು ಅಡಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.