ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನೀಡಿದ ಭರವಸೆಗಳೆಲ್ಲ ಈಡೇರಿಸಿ, ಜನಪರ ಕಾಳಜಿ ತೋರಿಸಿಕೊಟ್ಟಿದೆ ಎಂದು ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹಾಗೂ ಲೋಕಸಭೆ ಅಭ್ಯರ್ಥಿ ಜಿ. ಕುಮಾರನಾಯಕ ಅವರ ಪರ ರೋಡ್ ಶೋ ಮೂಲಕ ಪ್ರಚಾರ ನಡೆಸಿದ ಅವರು ಮಾತನಾಡಿ, ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಅನ್ನಭಾಗ್ಯ, ಗ್ಯಾರಂಟಿಗಳು ಬಡವರ ಹೊಟ್ಟೆ ತುಂಬಿಸಿವೆ. ಹೀಗಾಗಿ ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ದಿ. ರಾಜಾ ವೆಂಕಟಪ್ಪನಾಯಕ ಅವರು ಒಳ್ಳೆಯ ನಾಯಕ. ಅವರ ಸರಳತೆ ನಡೆ-ನುಡಿ ಹತ್ತಿರದಿಂದ ನಾನು ಕಂಡಿದ್ದೇನೆ. ಅವರು ಅಗಲಿಕೆ ಕ್ಷೇತ್ರದ ಜನರಿಗೆ ನೋವು ತಂದಿದ್ದು ನಿಜ. ಆದರೆ, ತಂದೆಯಂತೆ ಸರಳತೆಯ ನಾಯಕ ರಾಜಾ ವೇಣುಗೋಪಾಲ ಅವರಿಗೆ ಹಾಗೂ ಲೋಕಸಭೆ ಅಭ್ಯರ್ಥಿ ಜಿ. ಕುಮಾರನಾಯಕ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲನಾಯಕ ಮಾತನಾಡಿ, ನಮ್ಮ ತಂದೆಯವರ ದಾರಿಯಲ್ಲಿಯೇ ನಾನು ಕೂಡ ನಡೆಯುತ್ತೇನೆ. ಜನರ ಸೇವೆಗೆ ಯಾವಗಲೂ ಸಿದ್ಧನಿದ್ದೇನೆ. ಈ ಚುನಾವಣೆಯಲ್ಲಿ ನನಗೆ ಆರ್ಶೀವದಿಸಿ ಗೆಲ್ಲಿಸಿದರೆ, ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ನಿಮ್ಮ ಸಲಹೆದಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ರಾಜಾ ಸಂತೋಷ ನಾಯಕ, ಶಾಸಕ ಶರತ್ ಬಚ್ಚೆಗೌಡ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಆರ್.ಎಂ. ರೇವಡಿ, ನಿಂಗರಾಜ ಬಾಚಿಮಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.